
ಚೆನ್ನೈ: ಜನರ ಬೆಂಬಲದಿಂದಾಗಿ ತಮಿಳಿಗ ವೆಟ್ರಿ ಕಳಗಂ ಪಕ್ಷವು ಇಂದು ಬಹುದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಚುನಾವಣೆಯಲ್ಲಿ ಟಿವಿಕೆ ಒಂದೇ ಡಿಎಂಕೆಯನ್ನು ಸೋಲಿಸಬಲ್ಲದು ಎಂದು ಪಕ್ಷದ ಮುಖ್ಯಸ್ಥ, ನಟ ವಿಜಯ್ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿವಿಕೆ ಸ್ಥಾಪನೆಯ 3ನೇ ವಾರ್ಷಿಕೋತ್ಸವ ಸಮಾರಂಭವು ಇಲ್ಲಿ ನಡೆದಿದೆ. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಜನರನ್ನು ಉದ್ದೇಶಿಸಿ ವಿಜಯ್ ಮಾತನಾಡಿದರು. ‘ಇಂದು ನಾವು ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದ್ದೇವೆ. ಅದಕ್ಕೆ ಕಾರಣ ನೀವು ಮತ್ತು ಜನರು. ನೀವೇ ನನ್ನ ಬಲ, ಈ ಪಕ್ಷ ನಿಮ್ಮನ್ನೇ ಅವಲಂಬಿಸಿದೆ’ ಎಂದು ವಿಜಯ್ ಹೇಳಿದ್ದಾರೆ.
ಅಲ್ಲದೇ,‘ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ ಎಂದು ಬಿಂಬಿಸಲಾಗಿದೆ. ಆ ತ್ರಿಕೋನದಲ್ಲಿ ಒಂದು ಕೋನ ಜನರಿಂದ ಬೆಂಬಲಿತವಾಗಿರುವ ಟಿವಿಕೆ, ಮತ್ತೊಂದು ಡಿಎಂಕೆ, ಮೂರನೆಯದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಎನ್ನಲಾಗಿದೆ. ಆದರೆ, ಜನರಿಂದ ಬೆಂಬಲಿಸಲ್ಪಟ್ಟ ಟಿವಿಕೆ ಏಕಾಂಗಿಯಾಗಿಯೇ ಡಿಎಂಕೆಯನ್ನು ಮಣಿಸಬಲ್ಲದು’ ಎಂದೂ ವಿಜಯ್ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.