ADVERTISEMENT

ಲಡಾಖ್‌ ಅನ್ನು ಚೀನಾ ಭೂಭಾಗ ಎಂದು ತೋರಿಸಿದ್ದ ಟ್ವಿಟರ್‌ನಿಂದ ಲಿಖಿತ ರೂಪದ ಕ್ಷಮೆ

ಪಿಟಿಐ
Published 19 ನವೆಂಬರ್ 2020, 3:23 IST
Last Updated 19 ನವೆಂಬರ್ 2020, 3:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: 'ಲಡಾಖ್ ಅನ್ನು ಚೀನಾದ ಭೂಭಾಗ ಎಂದು ತಪ್ಪಾಗಿ ತೋರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಟ್ವಿಟರ್ ಜಂಟಿ ಸಂಸದೀಯ ಸಮಿತಿಯ ಎದುರು ಲಿಖಿತ ರೂಪದ ಕ್ಷಮೆ ಕೋರಿದೆ ಮತ್ತು ತಿಂಗಳ ಅಂತ್ಯದ ವೇಳೆಗೆ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ,' ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಬುಧವಾರ ಹೇಳಿದ್ದಾರೆ.

ಟ್ವಿಟರ್‌ ಇಂಡಿಯಾದ ಹಿರಿಯ ಗೌಪ್ಯತೆ ಅಧಿಕಾರಿ ಡೇಮಿಯನ್‌ ಕರಿಯನ್‌ ಅವರು ಸಹಿ ಮಾಡಿದ ಅಫಿಡವಿಟ್‌ನ ಮೂಲಕ ಲಿಖಿತ ಕ್ಷಮೆ ಕೋರಲಾಗಿದೆ ಎಂದು ಲೇಖಿ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಲಡಾಕ್‌ ಅನ್ನು ಚೀನಾದ ಭಾಗವಾಗಿ ತೋರಿಸಿದ ತಪ್ಪಿಗಾಗಿ ಕಳೆದ ತಿಂಗಳು ಸಂಸತ್‌ನ ದತ್ತಾಂಶ ಸಂರಕ್ಷಣಾ ಜಂಟಿ ಸಮಿತಿಯು ಟ್ವಿಟರ್‌ ವಿರುದ್ಧ ಕೆಂಡಾಮಂಡಲಗೊಂಡಿತ್ತು. 'ಇದು ದೇಶದ್ರೋಹ ಕೃತ್ಯ. ಅಮೆರಿಕ ಮೂಲದ ಟ್ವಿಟರ್‌ ಈ ಸಂಬಂಧ ಅಫಿಡವಿಟ್‌ ರೂಪದಲ್ಲಿ ವಿವರಣೆ ನೀಡಬೇಕು,' ಎಂದು ಹೇಳಿತ್ತು.

ಲೇಖಿ ನೇತೃತ್ವದ ಸಮಿತಿಯ ಎದುರು ಹಾಜರಾಗಿದ್ದ ಟ್ವಿಟರ್‌ ಇಂಡಿಯಾದ ಪ್ರತಿನಿಧಿಗಳು ಕ್ಷಮೆ ಕೋರಿದ್ದರು. 'ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವಂಥ ಕ್ರಿಮಿನಲ್‌ ಅಪರಾಧ ಇದಾಗಿರುವುದರಿಂದ, ಟ್ವಿಟರ್‌ ಇಂಡಿಯಾದಿಂದಲೇ ನೇರವಾಗಿ ಅಫಿಡವಿಟ್‌ ಸಲ್ಲಿಸಬೇಕು. ಅದರ, ಮಾರುಕಟ್ಟೆ ವಿಭಾಗದಿಂದ ಅಲ್ಲ,' ಎಂದು ಸಮಿತಿಯ ಸದಸ್ಯರು ತಿಳಿಸಿದ್ದರು. ಅದರಂತೆ ಈಗ ಅಫಿಡವಿಟ್‌ ಮೂಲಕ ಕ್ಷಮೆ ಕೋರಲಾಗಿದೆ.

'ಲಡಾಕ್‌ ಅನ್ನು ಚೀನಾದ ಭಾಗವಾಗಿ ತೋರಿಸಿ, ಭಾರತೀಯರ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಕ್ಕಾಗಿ, ಅವರು ಕ್ಷಮೆ ಕೋರಿದ್ದಾರೆ. ಅಲ್ಲದೆ, ನ.30ರ ಒಳಗಾಗಿ ತಪ್ಪು ಸರಿಪಡಿಸಿಕೊಳ್ಳುವ ಭರವಸೆ ನೀಡಿದ್ದಾರೆ. ರಾಷ್ಟ್ರದ ಸಮಗ್ರತೆ ಮತ್ತು ಭದ್ರತೆಗೆ ಸರ್ಕಾರ ಬದ್ಧವಾಗಿದೆ,' ಎಂದು ಮೀನಾಕ್ಷಿ ಲೇಖಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.