ADVERTISEMENT

ಪ್ರತಿಭಟನೆ ವೇಳೆ ಅಂಗಿ ಕಳಚಿದ್ದ ಕಾಂಗ್ರೆಸ್‌ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ

ಗುಜರಾತ್‌ ವಿಧಾನಸಭೆ ಪ್ರವೇಶದ್ವಾರದ ಬಳಿ ನಡೆದ ಘಟನೆ

ಪಿಟಿಐ
Published 25 ಮಾರ್ಚ್ 2022, 11:26 IST
Last Updated 25 ಮಾರ್ಚ್ 2022, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಾಂಧಿನಗರ:ಗುಜರಾತ್‌ ವಿಧಾನಸಭೆ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸುವ ವೇಳೆ ಅಂಗಿ ಕಳಚಿದ್ದ ಕಾಂಗ್ರೆಸ್‌ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ 15 ಶಾಸಕರು ಸದನ ಆರಂಭಕ್ಕೂ ಮುನ್ನ ವಿಧಾನಸಭೆಯ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ವಿಮಲ್‌ ಚುಡಾಸಮ್ ಮತ್ತು ಲಲಿತ್‌ ವಸೋಯಾ ಎಂಬುವವರು ತಮ್ಮ ಶರ್ಟ್‌ ತೆಗೆದು ಪ್ರತಿಭಟಿಸಿದರು.

ಈ ಕುರಿತು ವಿಧಾನಸಭೆಯ ಪಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು. ಮಹಿಳಾ ಪೊಲೀಸ್‌ ಸಿಬ್ಬಂದಿ ಮುಂದೆಯೇ ಶರ್ಟ್‌ ತೆಗೆದಿರುವುದು ಅಕ್ಷಮ್ಯ.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇದೇ ರೀತಿ ನಾವು ಸದನದೊಳಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ನಿಮಾಬೆನ್‌ ಆಚಾರ್ಯಾ, ಘಟನೆಯ ವಿಡಿಯೊ ಕ್ಲಿಪ್‌ ವೀಕ್ಷಿಸಿದ ಬಳಿಕ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಇದಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಿಮಲ್‌ ಚುಡಾಸಮ್, ಸರಿಯಾಗಿ ವಿದ್ಯುತ್‌ ಪೂರೈಕೆಯಾಗದೆ ನೀರಾವರಿ ಮೇಲೆ ಪರಿಣಾಮ ಬೀರಿದೆ. ತೆಂಗಿನ ಮರ ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.