ADVERTISEMENT

ದೆಹಲಿ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ, ಉಬರ್ ಚಾಲಕ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2023, 16:24 IST
Last Updated 3 ಮಾರ್ಚ್ 2023, 16:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಉಬರ್ ಆಟೊ ಚಾಲಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಉಬರ್ ಆಟೊ ಚಾಲಕ ವಿನೋದ್ ಕುಮಾರ್ ಯಾದವ್ (24) ಎಂದು ಗುರುತಿಸಲಾಗಿದೆ. ಮೊದಲು ವಿನೋದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆತನೇ ಆರೋಪಿ ಎಂದು ದೃಢಪಟ್ಟ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಲಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಪತ್ರಕರ್ತೆಯೊಬ್ಬರು ಗುರುವಾರ ರಾತ್ರಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ADVERTISEMENT

ಭಾರತ್ ನಗರ ನಿವಾಸಿಯಾದ ಪತ್ರಕರ್ತೆಯು ಬುಧವಾರ ಸಂಜೆ 4.40ರ ಸುಮಾರಿಗೆ ನ್ಯೂ ಫ್ರೆಂಡ್ಸ್ ಕಾಲೋನಿಯಿಂದ ಮಲ್ವಿಯಾ ನಗರದಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ಉಬರ್ ಆಟೊದಲ್ಲಿ ತೆರಳುತ್ತಿದ್ದಾಗ, ಆಟೊ ಚಾಲಕ ಪತ್ರಕರ್ತೆಯನ್ನು ಕಾಮುಕ ದೃಷ್ಟಿಯಿಂದ ನೋಡಿದ ಎಂದು ಆರೋಪಿಸಲಾಗಿತ್ತು.

ಈ ಘಟನೆಯನ್ನು ಪತ್ರಕರ್ತೆಯು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಆಟೊದಲ್ಲಿ ಪ್ರಯಾಣಿಸುತ್ತಿದ್ದಾಗ, ಚಾಲಕ ಆಟೊದ ಎಡಗಡೆ ಇದ್ದ ಕನ್ನಡಿಯಿಂದ ತನ್ನನ್ನು, ಅದರಲ್ಲೂ ನನ್ನ ಎದೆಯ ಭಾಗವನ್ನು ದಿಟ್ಟಿಸಿ ನೋಡುತ್ತಿದ್ದ. ಆಗ ನಾನು ಆಟೊದ ಬಲ ಭಾಗಕ್ಕೆ ಸರಿದು ಕುಳಿತೆ. ಸ್ವಲ್ಪ ಸಮಯದ ನಂತರ ಆತ, ಬಲ ಭಾಗದಲ್ಲಿದ್ದ ಕನ್ನಡಿಯಿಂದ ಮತ್ತೆ ದಿಟ್ಟಿಸುತ್ತಿದ್ದನ್ನು ಗಮನಿಸಿದೆ. ಆಗ ನಾನು ಯಾವ ಕನ್ನಡಿಗೂ ಕಾಣಿಸದಂತೆ ಸಂಪೂರ್ಣವಾಗಿ ಎಡಭಾಗಕ್ಕೆ ಸರಿದು ಕುಳಿತೆ. ಆಗ ಆತ ಹಿಂದೆ ತಿರುಗಿ ತಿರುಗಿ ನನ್ನನ್ನು ನೋಡಲು ಪ್ರಾರಂಭಿಸಿದ. ಮೊದಲು ನಾನು ಉಬರ್‌ನ ಸುರಕ್ಷತಾ ಕ್ರಮಗಳನ್ನು ಬಳಸಲು ಪ್ರಯತ್ನಿಸಿದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪ್ರಯಾಣಿಸಬೇಕಿದ್ದ ಅಂತರ ಕಡಿಮೆ ಇದ್ದಿದ್ದರಿಂದ ರೈಡ್‌ ಅನ್ನು ಕ್ಯಾನ್ಸಲ್ ಮಾಡಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.