ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅನುಷ್ಠಾನಕ್ಕಾಗಿ ರಚಿಸಲಾದ ಸಮಿತಿಯು ಸಿದ್ಧಪಡಿಸಿದ ನಿಯಮಾವಳಿಗಳ ಅಂತಿಮ ಕರಡನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಡೆಹ್ರಾಡೂನ್‌ನಲ್ಲಿ ಸಲ್ಲಿಸಲಾಯಿತು
– ಪಿಟಿಐ ಚಿತ್ರ
ನವದೆಹಲಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಉತ್ತರಾಖಂಡ ಸರ್ಕಾರವು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಅನುಮೋದನೆ ನೀಡಿದೆ.
ಗಣರಾಜ್ಯೋತ್ಸವ ಅಥವಾ ಜ. 28ರಂದು ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಗೆ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗ ಈ ಕಾನೂನು ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.14ಕ್ಕೂ ಮುನ್ನ ಮಾತುಕತೆಗೆ ಕೆಎಂಎಂ ಒತ್ತಾಯ
ಚಂಡೀಗಢ: ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಫೆ.14ಕ್ಕೂ ಮುಂಚಿತವಾಗಿ ಸಭೆ ನಡೆಸುವಂತೆ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಸೋಮವಾರ ಒತ್ತಾಯಿಸಿದೆ.
ಇದೇ ಸಂದರ್ಭದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವಂತೆ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಅವರಲ್ಲಿ ಮನವಿ ಮಾಡಿದೆ.
ಕೆಎಂಎಂ, ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಖನೌರಿ ಮತ್ತು ಶಂಭು ಗಡಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದವು.
ಶನಿವಾರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಕೇಂದ್ರ ಸರ್ಕಾರದ ಉನ್ನತ ನಿಯೋಗವು ಡಲ್ಲೇವಾಲ್ ಮತ್ತು ಇತರ ರೈತ ನಾಯಕರನ್ನು ಭೇಟಿಯಾಗಿತ್ತು. ಫೆ.14ರಂದು ಚಂಡೀಗಢದಲ್ಲಿ ಮಾತುಕತೆಗೆ ಆಹ್ವಾನಿಸಿತ್ತು.
ಯುಜಿಸಿ ನಿಯಮಾವಳಿ ಹಿಂಪಡೆಯಲು ಸ್ಟಾಲಿನ್ ಒತ್ತಾಯ
ಚೆನ್ನೈ: ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ನೂತನ ಕರಡು ನಿಯಮಾವಳಿಯಲ್ಲಿರುವ ಹಲವು ಅಂಶಗಳು ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಮತ್ತು ನೀತಿಗಳೊಂದಿಗೆ ಸಂಘರ್ಷಕ್ಕಿಳಿಯುವಂತಿವೆ. ಹೀಗಾಗಿ ಕರಡನ್ನು ಹಿಂಪಡೆಯಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ ಪತ್ರ ಬರೆದಿದ್ದಾರೆ.
ಕರಡು ನಿಯಮಾವಳಿಗಳು ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಾರ್ವಭೌಮತೆ, ಸ್ವಾಯತ್ತತೆ ಮತ್ತು ಅಭಿವೃದ್ಧಿಗೆ ಗಂಭೀರ ಸವಾಲೊಡ್ಡಲಿವೆ ಎಂದು ರಾಜ್ಯವು ಭಾವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯೇತರ ಪಕ್ಷಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಪತ್ರ ಬರೆದು, ಯುಜಿಸಿ ಕರಡು ನಿಯಮಾವಳಿಗಳನ್ನು ಹಿಂಪಡೆಯುವ ಸಂಬಂಧ ವಿಧಾನಸಭೆಗಳಲ್ಲಿ ನಿರ್ಣಯ ಮಂಡಿಸಲು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.