ADVERTISEMENT

ಸಾಧುಗಳ ಹತ್ಯೆ ಪ್ರಕರಣಕ್ಕೆ ಧರ್ಮದ ಲೇಪ ಬಾರದಂತೆ ನೋಡಿಕೊಳ್ಳಿ: ಯೋಗಿಗೆ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 13:18 IST
Last Updated 28 ಏಪ್ರಿಲ್ 2020, 13:18 IST
   

ಮುಂಬೈ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸೋಮವಾರನಡೆದ ಇಬ್ಬರು ಸಾಧುಗಳ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕರೆ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ ಠಾಕ್ರೆ, ‘ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಆದರೆ, ಪ್ರಕರಣಕ್ಕೆ ಯಾರೂ ಧರ್ಮದ ಬಣ್ಣ ಬಳಿಯಂದತೆ ನೋಡಿಕೊಳ್ಳಿ,’ ಎಂದು ಸಲಹೆ ನೀಡಿದ್ದಾರೆ.

‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಕರೆ ಮಾಡಿದ್ದರು. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಇಬ್ಬರು ಸಾಧುಗಳನ್ನು ಅಮಾನವೀಯವಾಗಿ ಹತ್ಯೆ ಮಾಡಿದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಇಂತಹ ಅಮಾನವೀಯ ಕೃತ್ಯ ನಡೆಸಿದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕೈಗೊಂಡ ರೀತಿಯಲ್ಲೇ ಕ್ರಮ ಕೈಗೊಳ್ಳಬೇಕು,’ ಎಂದು ಅವರು ಮನವಿ ಮಾಡಿದರು. ‌

ADVERTISEMENT

ಆದರೆ, ಪ್ರಕರಣಕ್ಕೆ ಯಾರೂ ಕೋಮು ಬಣ್ಣ ಬಳಿಯದಂತೆ ನೋಡಿಕೊಳ್ಳಬೇಕಾಗಿ ಅವರು ಯೋಗಿ ಆದಿತ್ಯನಾಥ ಅವರಿಗೆ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮಾಡಿದ ಟ್ವೀಟ್‌ನಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಇಬ್ಬರು ಸಾಧು ಸೇರಿದಂತೆ ಒಟ್ಟು ಮೂವರನ್ನು ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 110 ಮಂದಿಯನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಠಾಕ್ರೆ ಅವರಿಗೆ ಕರೆ ಮಾಡಿದ್ದ ಯೋಗಿ ಆದಿತ್ಯನಾಥ, ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಸಲಹೆ ನೀಡಿದ್ದರು. ನಂತರದಲ್ಲಿ ಘಟನೆಗೆ ಧರ್ಮದ ಲೇಪ ಬಂದು,ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು.

ಹೀಗಿರುವಾಗಲೇ ಉತ್ತರ ಪ್ರದೇಶದಲ್ಲೂ ಮಹಾರಾಷ್ಟ್ರದ ರೀತಿಯಲ್ಲೇ ಘಟನೆ ನಡೆದಿದ್ದು,ಉದ್ಧವ ಠಾಕ್ರೆ ಅವರು ಯೋಗಿ ಆದಿತ್ಯನಾಥ ಅವರಿಗೆ ಈ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.