ADVERTISEMENT

ರಾಮ ಮಂದಿರ ಭೂಮಿಪೂಜೆಯಲ್ಲಿ ಉದ್ಧವ್‌ ಪಾಲ್ಗೊಳ್ಳುವುದು ಖಚಿತ: ಶಿವಸೇನೆ ‌

ಪಿಟಿಐ
Published 21 ಜುಲೈ 2020, 10:16 IST
Last Updated 21 ಜುಲೈ 2020, 10:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ‘ಅಯೋಧ್ಯೆಯಲ್ಲಿ ಆಗಸ್ಟ್‌ 5ರಂದು ನಡೆಯಲಿರುವ ರಾಮ ಮಂದಿರದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪಾಲ್ಗೊಳ್ಳುವುದು ಖಚಿತ’ ಎಂದು ಶಿವಸೇನೆಯ ಮುಖಂಡ, ರಾಜ್ಯಸಭೆ ಸದಸ್ಯ ಸಂಜಯ್‌ ರಾವುತ್‌ ಹೇಳಿದ್ದಾರೆ.

ಉದ್ಧವ್‌ ಅವರಿಗೆ ಆಹ್ವಾನ ಬಂದಿದೆಯೇ ಎಂಬ ಪ್ರಶ್ನೆಗೆ, ‘ಆಹ್ವಾನ ಬರಲಿದೆ. ಅಷ್ಟೇ ಅಲ್ಲ ಶಿವಸೇನೆಯು ಈ ಕಾರ್ಯಕ್ರಮದಲ್ಲಿ ಖಂಡಿತವಾಗಿ ಪಾಲ್ಗೊಳ್ಳುವುದು. ರಾಮಂದಿರ ನಿರ್ಮಾಣ ವಿಚಾರದಲ್ಲಿ ಶಿವಸೇನೆಯು ಧಾರ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿದೆ’ ಎಂದು ಅವರು ಟಿ.ವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್‌ 5ರಂದು ಚಾಲನೆ ಲಭಿಸಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ADVERTISEMENT

‘ದೇಶ ಮತ್ತು ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾರಿತ್ರಿಕ ಮಹತ್ವವಿದೆ. ಉದ್ಧವ್‌ ಅವರು ಅಯೋಧ್ಯೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಮುಖ್ಯಮಂತ್ರಿ ಆದ ನಂತರವೂ ಅವರು ಅಲ್ಲಿಗೆ ಹೋಗಿದ್ದಾರೆ. ಕೋವಿಡ್‌ ಸಂಕಷ್ಟ ಇಲ್ಲದಿದ್ದರೆ ಲಕ್ಷಾಂತರ ಮಂದಿ ರಾಮ ಭಕ್ತರೂ ಭೂಮಿಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು’ ಎಂದು ರಾವುತ್‌ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಎಷ್ಟು ಮಂದಿಯನ್ನು ಆಹ್ವಾನಿಸಲಾಗುತ್ತದೆ, ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಲಾಗುತ್ತದೆಯೇ, ಯಾವ ರೀತಿಯ ‘ರಾಜಕೀಯ ಅಂತರ’ ಕಾಯ್ದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ ಎಂದು ಅವರು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.