ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್
ಕೃಪೆ: ಪಿಟಿಐ
ಚೆನ್ನೈ: ನಟ, ರಾಜಕಾರಣಿ ವಿಜಯ್ ಅವರ ವಿರುದ್ಧ ಟೀಕೆ ಮಾಡಿರುವ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ತಾವು ಶನಿವಾರವಷ್ಟೇ ಪಕ್ಷದ ಕೆಲಸಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಕಾಲೆಳೆದಿದ್ದಾರೆ. ಹಾಗೆಯೇ, ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ, ಅವರಿಗೆ ರಾಜಕೀಯ ಸಿದ್ದಾಂತದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಪರೋಕ್ಷವಾಗಿ ತಿವಿದಿದ್ದಾರೆ.
ಡಿಎಂಕೆ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಉದಯನಿಧಿ, ನೇರವಾಗಿ ಕಾಂಗ್ರೆಸ್ ಪಕ್ಷದ ಹೆಸರನ್ನು ಹೇಳದೆ ತಮ್ಮ ಪ್ರಮುಖ ಮಿತ್ರ ಪಕ್ಷವು ಸದಾ ಜೊತೆಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಡಿಎಂಕೆ ನಾಯಕ, ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರನ್ನೇ ಮರೆತಿರುವ ವಿರೋಧ ಪಕ್ಷದ ನಾಯಕರಿಗೆ (ಪಳನಿಸ್ವಾಮಿಗೆ) ಸದ್ಯ ನೆನಪಿರುವುದು ಬಿಜೆಪಿಯ ಅಮಿತ್ ಶಾ ಮಾತ್ರ ಎಂದು ಕುಟುಕಿದ್ದಾರೆ.
'ಶನಿವಾರವಷ್ಟೇ ಹೊರಗೆ ಬರುವುದಿಲ್ಲ'
ವಾರದ 4–5 ದಿನ ಪ್ರವಾಸ ಕೈಗೊಳ್ಳುವುದಾಗಿ ಹೇಳಿಕೊಂಡಿರುವ ಉದಯನಿಧಿ, ಭಾನುವಾರವೂ ಅಧಿಕೃತ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ತಮ್ಮ ಕೆಲಸಗಳನ್ನು ಮಾಡಲು, ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲು ವಾರ ನೋಡುವುದಿಲ್ಲ ಎಂದಿರುವ ಅವರು, ವಿಜಯ್ ಅವರನ್ನುದ್ದೇಶಿಸಿ, 'ನಾನು ಶನಿವಾರ ಮಾತ್ರ ಹೊರಗೆಬರುವುದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.
2026ರ ವಿಧಾನಸಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸವನ್ನು ಸೆಪ್ಟೆಂಬರ್ 13ರಂದು ಆರಂಭಿಸಿರುವ ಟಿವಿಕೆ ಮುಖ್ಯಸ್ಥ ವಿಜಯ್, ಶನಿವಾರಗಳಂದು ಮಾತ್ರ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಕೆಲಸದ ದಿನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಶನಿವಾರವಷ್ಟೇ ಪ್ರಚಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದ ವಿಜಯ್, ಮುಂಬರುವ ದಿನಗಳಲ್ಲಿ ತಮ್ಮ ಪ್ರಚಾರ ಪಟ್ಟಿಗೆ ಭಾನುವಾರವನ್ನೂ ಸೇರಿಸಿಕೊಳ್ಳುವುದಾಗಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.