ADVERTISEMENT

ಉಕ್ರೇನ್‌ ಪೊಲೀಸರು ಭಾರತೀಯರ ಜತೆ ಅನುಚಿತವಾಗಿ ವರ್ತಿಸಿದ್ದೇಕೆ? ಸಚಿವರ ಉತ್ತರವಿದು

ಪಿಟಿಐ
Published 5 ಏಪ್ರಿಲ್ 2022, 16:17 IST
Last Updated 5 ಏಪ್ರಿಲ್ 2022, 16:17 IST
ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದ ವಿಡಿಯೊದ ಚಿತ್ರ
ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದ ವಿಡಿಯೊದ ಚಿತ್ರ    

ನವದೆಹಲಿ: ಉಕ್ರೇನ್‌ನಲ್ಲಿ ಗಡಿ ದಾಟುವ ವೇಳೆ ಅಲ್ಲಿನ ಪೊಲೀಸರು ಭಾರತೀಯ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಕೇಂದ್ರ ಸಚಿವ ವಿ. ಕೆ. ಸಿಂಗ್ ಮಂಗಳವಾರ ಲೋಕಸಭೆಯಲ್ಲಿ ಕಾರಣ ನೀಡಿದ್ದಾರೆ.

‘ಗಡಿ ದಾಟುವ ಧಾವಂತದಲ್ಲಿ ಭಾರತೀಯ ವಿದ್ಯಾರ್ಥಿಗಳು ವೃದ್ಧರನ್ನು ತಳ್ಳಿದ್ದರು. ಹೀಗಾಗಿ ಪೊಲೀಸರು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದರೇ ಹೊರತು, ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತಹಾಕುವ ವೇಳೆ ಗೈರಾಗಿದ್ದಕ್ಕೆ ಅಲ್ಲ’ ಎಂದು ಹೇಳಿದ್ದಾರೆ.

‘ಉಕ್ರೇನ್‌ನಲ್ಲಿನ ಪರಿಸ್ಥಿತಿ’ ಕುರಿತ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಅವರು, ಈ ವಿಷಯವನ್ನು ತಿಳಿಸಿದರು.

ADVERTISEMENT

‘ಪೊಲೀಸರ ಅನುಚಿತ ವರ್ತನೆಯ ಬಗ್ಗೆ ಚರ್ಚೆಗಳಾಗಿವೆ. ಗಡಿ ಭಾಗದಲ್ಲಿ ಜನಸಂದಣಿ ಇತ್ತು. ಆದರೆ ಅಂಥ ಪರಿಸ್ಥಿತಿಯಲ್ಲಿ ನಾವು ಶಿಸ್ತು ಕಾಪಾಡಿಕೊಳ್ಳುವ, ಸಾಲಿನಲ್ಲಿ ನಿಲ್ಲುವ ಮನಸ್ಥಿತಿಯಲ್ಲಿರುವುದಿಲ್ಲ. ಗಡಿ ದಾಟುವ ಧಾವಂತದಲ್ಲಿ ಭಾರತೀಯ ವಿದ್ಯಾರ್ಥಿಗಳು ವಯಸ್ಸಾದವರನ್ನು ತಳ್ಳಿದರು. ಹೀಗಾಗಿ ಪೊಲೀಸರು ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಎಲ್ಲಿ ನಮ್ಮ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆಯಂಥ ಘಟನೆಗಳು ನಡೆದವೋ ಅವುಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದೇವೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಹಾಕುವುದರಿಂದ ದೂರ ಉಳಿದಿದ್ದಕ್ಕೆ ಅಂಥ ಘಟನೆಗಳು ನಡೆದಿಲ್ಲ’ ಎಂದು ಅವರು ವಿವರಿಸಿದರು.

ಹೀಗೆಯೇ ಹಲವಾರು ವಿಷಯಗಳಲ್ಲಿ ತಪ್ಪು ಗ್ರಹಿಕೆಗಳಾಗುತ್ತವೆ. ಅವುಗಳನ್ನು ಸರಿಪಡಿಸುವುದು ನಮ್ಮ ಉದ್ದೇಶ ಎಂದೂ ಅವರು ಇದೇ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.