ADVERTISEMENT

ಗುಜರಾತ್ ತೂಗುಸೇತುವೆ ದುರಂತಕ್ಕೆ ಮರುಗಿದ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ

ಪಿಟಿಐ
Published 1 ನವೆಂಬರ್ 2022, 5:04 IST
Last Updated 1 ನವೆಂಬರ್ 2022, 5:04 IST
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌   

ವಿಶ್ವಸಂಸ್ಥೆ:ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಸಂಭವಿಸಿದತೂಗುಸೇತುವೆ ದುರಂತದ ಬಗ್ಗೆ ಮರುಕ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಆ್ಯಂಟೊನಿಯೊ ಗುಟೆರಸ್‌ ಅವರು, ಮೃತರಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ.

'ಗುಜರಾತ್‌ನಲ್ಲಿ ಸಂಭವಿಸಿದ ಮೊರ್ಬಿ ತೂಗುಸೇತುವೆ ದುರಂತದ ಸುದ್ದಿ ಕೇಳಿ ಮಹಾ ಪ್ರಧಾನ ಕಾರ್ಯದರ್ಶಿ ಅವರು ತೀವ್ರ ದುಃಖಿತರಾಗಿದ್ದಾರೆ' ಎಂದು ಗುಟೆರಸ್‌ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಂತ್ರಸ್ತರ ಕುಟುಂಬದವರಿಗೆಗುಟೆರಸ್‌ ಅವರು ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದಿತ್ತು.ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವವರ ಶೋಧಕಾರ್ಯ ಮುಂದುವರಿದಿದೆ.

ಈ ಸಂಬಂಧ ಮೊರ್ಬಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ರಾಜ್ಯ ಸರ್ಕಾರವೂ ತನಿಖಾ ತಂಡವನ್ನು ರಚಿಸಿದೆ.

ಈವರೆಗೆ ಒಟ್ಟು 136 ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತರಲ್ಲಿ 50 ಮಕ್ಕಳು ಮತ್ತು 40 ಮಹಿಳೆಯರು ಸೇರಿದ್ದಾರೆ. ಒಟ್ಟು 170 ಜನರನ್ನು ರಕ್ಷಿಸಲಾಗಿದೆ. ಅವರಿಗೆ ಮೊರ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡ ಹಲವರು ಮನೆಗೆ ಮರಳಿದ್ದಾರೆ. ಅವಘಡದಲ್ಲಿ ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೊರ್ಬಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.