ADVERTISEMENT

ರಾಜ್ಯಗಳಿಗೆ ಪೂರೈಕೆಯಾಗದ ಕೋವಿಡ್‌ ಲಸಿಕೆ: 3ನೇ ಹಂತ ಆರಂಭಕ್ಕೆ ವಿಘ್ನ

ಪಿಟಿಐ
Published 30 ಏಪ್ರಿಲ್ 2021, 21:36 IST
Last Updated 30 ಏಪ್ರಿಲ್ 2021, 21:36 IST
ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್   

ನವದೆಹಲಿ: ದೇಶದಾದ್ಯಂತ ಕೋವಿಡ್‌ ಲಸಿಕೆಯ ಮೂರನೇ ಹಂತದ ಅಭಿಯಾನ ಮೇ 1ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಲಸಿಕೆ ಕೊರತೆ ಇರುವ ಕಾರಣ ದೆಹಲಿ ಸೇರಿ 12 ರಾಜ್ಯಗಳು ಮೂರನೇ ಹಂತದ ಲಸಿಕಾ ಕಾರ್ಯಕ್ರಮವನ್ನು ಮುಂದೂಡಿವೆ.

ಮೂರನೇ ಹಂತದ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಗುರುವಾರ ಸಂಜೆವರೆಗೆ 2.45 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಕೆಲವು ರಾಜ್ಯಗಳು ಮಾತ್ರ ಲಸಿಕೆ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಘೋಷಿಸಿವೆ.

ಮೂರನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಲಸಿಕೆಗಳನ್ನು ರಾಜ್ಯ ಸರ್ಕಾರಗಳು, ತಮ್ಮದೇ ವೆಚ್ಚದಲ್ಲಿ ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕಿತ್ತು. ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೀರಂ ಕಂಪನಿಯ ಕೋವಿಶೀಲ್ಡ್‌ ಮತ್ತು ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ಹಲವು ರಾಜ್ಯ ಸರ್ಕಾರಗಳು ಬೇಡಿಕೆ ಸಲ್ಲಿಸಿವೆ. ಆದರೆ ಯಾವ ರಾಜ್ಯಕ್ಕೂ ಲಸಿಕೆ ಪೂರೈಕೆಯಾಗಿಲ್ಲ.

ADVERTISEMENT

ಹೀಗಾಗಿ ಹಲವು ರಾಜ್ಯಗಳು 18-45 ವರ್ಷದವರಿಗೆ ಲಸಿಕೆ ನೀಡುವ ಮೂರನೇ ಹಂತದ ಲಸಿಕೆ ಕಾರ್ಯಕ್ರಮವನ್ನು ಮೇ 1ರಿಂದ ಆರಂಭಿಸುವುದಿಲ್ಲ ಎಂದು ಹೇಳಿವೆ.

ಮೇ 1ರಿಂದ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಈ ಹಿಂದೆಯೇ ಘೋಷಿಸಿತ್ತು.ಎರಡನೇ ಹಂತದ ಲಸಿಕೆ ಅಭಿಯಾನಕ್ಕೆ ಲಸಿಕೆಯ ಕೊರತೆ ಇದೆಎಂದು ಕರ್ನಾಟಕ, ಪಂಜಾಬ್, ಗುಜರಾತ್, ರಾಜಸ್ಥಾನ, ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಛತ್ತೀಸಗಡ, ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಹೇಳಿವೆ.

‘18 ಮೇಲ್ಪಟ್ಟವರಿಗೆ ಲಸಿಕೆ ಸದ್ಯಕ್ಕಿಲ್ಲ’
ಬೆಂಗಳೂರು: ‘ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಒಂದು ಕೋಟಿ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ ಇನ್ನೂ ಪೂರೈಕೆ ಮಾಡಿಲ್ಲ. ಹಾಗಾಗಿ, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಆ ಲಸಿಕೆ ವಿತರಣೆ ನಡೆಯುವುದಿಲ್ಲ’ ಎಂದು ಆರೋಗ್ಯ ಸಚಿವ
ಡಾ.ಕೆ. ಸುಧಾಕರ್ ತಿಳಿಸಿದರು.

ಸುದ್ದಿಗಾರರ ಜತೆಗೆ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ 18 ರಿಂದ 44 ವರ್ಷದವರು ಸುಮಾರು 3.5 ಕೋಟಿ ಜನರಿದ್ದಾರೆ. ಲಸಿಕೆ ರಾಜ್ಯಕ್ಕೆ ಬಂದ ಬಳಿಕ ವಿತರಣೆಯ ದಿನಾಂಕವನ್ನು ತಿಳಿಸಲಾಗುವುದು. ಹೆಸರು ನೋಂದಾಯಿಸಿದವರು ಲಸಿಕೆಗಾಗಿ ಆರೋಗ್ಯ ಕೇಂದ್ರಗಳಿಗೆ ತೆರಳಬಾರದು’ ಎಂದರು. ‘ನಮ್ಮ ಬಳಿ ಇನ್ನು 6 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಈವರೆಗೆ ಶೇ 1.4ರಷ್ಟು ಮಾತ್ರ ಲಸಿಕೆ ವ್ಯರ್ಥವಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಸಮಸ್ಯೆಯಾಗುವುದಿಲ್ಲ’ ಎಂದರು.

ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಆರಂಭ
ಉತ್ತರ ಪ್ರದೇಶ ಮತ್ತು ಗುಜರಾತ್‌ ಸರ್ಕಾರಗಳು ಮಾತ್ರ ಶನಿವಾರದಿಂದ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭಿಸುವುದಾಗಿ ಘೋಷಿಸಿವೆ. ಉತ್ತರ ಪ್ರದೇಶದ ಏಳು ಜಿಲ್ಲೆಗಳಲ್ಲಿ ಮತ್ತು ಗುಜರಾತ್‌ನ 10 ಜಿಲ್ಲೆಗಳಲ್ಲಿ ಲಸಿಕೆ ಕಾರ್ಯಕ್ರಮ ಆರಂಭಿಸಲಾಗುತ್ತದೆ. ಆದರೆ ಉತ್ತರಾಖಂಡ, ಬಿಹಾರ, ಹಿಮಾಚಲ ಪ್ರದೇಶ, ಹರಿಯಾಣ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ಗುರುವಾರ ಸಂಜೆ, ‘ಮೂರನೇ ಹಂತದ ಕಾರ್ಯಕ್ರಮ ಆರಂಭಿಸಲು ಲಸಿಕೆಯ 3 ಕೋಟಿ ಡೋಸ್‌ ಅಗತ್ಯವಿದೆ. ಲಸಿಕೆ ಪೂರೈಕೆಯಾದರೆ ಮಾತ್ರ 18-45 ವರ್ಷದವರಿಗೆ ಲಸಿಕೆ ನೀಡಬಹುದು’ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.

***

ಲಸಿಕೆ ಪೂರೈಕೆಯಾಗಿಲ್ಲ. ನಾವು ದಿನಾಂಕ ಘೋಷಿಸುವವರೆಗೂ ಜನರು ಲಸಿಕೆ ಕೇಂದ್ರಗಳ ಎದುರು ಬರಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ.
-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.