ADVERTISEMENT

ಭಾನುವಾರ ಬಂದ ಬಜೆಟ್‌ ದಿನಾಂಕ: ಸಂಪ್ರದಾಯ ಮುಂದುವರಿಯುತ್ತಾ? ಮುರಿಯುತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2026, 7:32 IST
Last Updated 7 ಜನವರಿ 2026, 7:32 IST
   

ನವದೆಹಲಿ: ಸಂಪ್ರದಾಯದಂತೆ ಈ ಬಾರಿ ಕೇಂದ್ರದ ಬಜೆಟ್‌ ಫೆ. 1ರಂದೇ ಮಂಡನೆಯಾಗಲಿದೆಯೇ ಎಂಬ ಚರ್ಚೆ ವ್ಯಾಪಕವಾಗಿದೆ. ಕಾರಣವಿಷ್ಟೇ, ಈ ಬಾರಿ ಫೆ. 1 ಭಾನುವಾರ ರಜಾ ದಿನ. ಆದರೆ ಸರ್ಕಾರ ಫೆ. 1ಕ್ಕೆ ಬಜೆಟ್ ಮಂಡಿಸಲಿದೆಯೇ ಅಥವಾ ಫೆ. 2ರಂದು ಸೋಮವಾರ ಮಂಡಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

2017ಕ್ಕೂ ಮುಂಚೆ ಫೆಬ್ರುವರಿಯ ಕೊನೆಯ ದಿನದಂದು ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ, ಹೊಸ ಆರ್ಥಿಕ ವರ್ಷದ ಏಪ್ರಿಲ್‌1ರಿಂದ ಬಜೆಟ್‌ ಅನುಷ್ಠಾನವಾಗಲಿ ಎಂಬ ಉದ್ದೇಶಕ್ಕಾಗಿ 2017ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡನೆ ಮಾಡುವ ಸಂಪ್ರದಾಯ ಆರಂಭಿಸಿದರು. ಇದರಿಂದ ಮಾರ್ಚ್‌ ಅಂತ್ಯದೊಳಗೆ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಸಿಗುವಂತಾಗಿತ್ತು. 

ಆದರೆ, ಈ ವರ್ಷ ಫೆ. 1 ಭಾನುವಾರವಾಗಿದ್ದು, ಸರ್ಕಾರ ಬಜೆಟ್ ಮಂಡನೆಯನ್ನು ಫೆ. 2 ಸೋಮವಾರಕ್ಕೆ ಬದಲಾಯಿಸಬಹುದು ಎಂಬ ಊಹಾಪೋಹಗಳು ಕೇಳಿಬಂದಿವೆ.

ADVERTISEMENT

ಅಲ್ಲದೇ ಫೆ. 1 ಗುರು ರವಿದಾಸ ಜಯಂತಿಯೂ ಆಗಿದ್ದು, ಕೆಲವು ರಾಜ್ಯಗಳಲ್ಲಿ ಪರಿಮಿತ ರಜೆ ಇದೆ. ಭಾನುವಾರವಾದ್ದರಿಂದ ಮಾಮೂಲಿನಂತೆ ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆಗಳು ಮುಚ್ಚಿರುತ್ತವೆ.

ಇಂದು(ಬುಧವಾರ) ಸಭೆ ಸೇರಲಿರುವ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಬಜೆಟ್ ಮಂಡನೆ ದಿನಾಂಕದ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಭಾನುವಾರ ಅಧಿವೇಶನ:

ಭಾನುವಾರ ಅಧಿವೇಶನ ನಡೆಸಬಾರದು ಎಂಬ ಯಾವುದೇ ನಿಯಮಗಳಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಭಾನುವಾರದಂದು ಅಧಿವೇಶನ ನಡೆದ ಉದಾಹರಣೆಗಳು ಇವೆ. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಳೆಗಾಲದ ಅಧಿವೇಶನ ಭಾನುವಾರ ನಡೆದಿತ್ತು. ಸಂಸತ್ತಿನ ಮೊದಲ ಅಧಿವೇಶನದ 60ನೇ ವಾರ್ಷಿಕೋತ್ಸವವನ್ನು ಗುರುತಿಸಲು 2012ರ ಮೇ 13ರಂದು ಭಾನುವಾರ ಅಧಿವೇಶನ ನಡೆಸಲಾಗಿತ್ತು.