ADVERTISEMENT

ಇಲ್ಲಿ ಹೆಚ್ಚು ಕೆಲಸವಾಗಿಲ್ಲ: ರಾಹುಲ್ ಕ್ಷೇತ್ರ ವಯನಾಡಲ್ಲಿ ಸ್ಮೃತಿ ಇರಾನಿ ಹೇಳಿಕೆ

ಪಿಟಿಐ
Published 3 ಮೇ 2022, 16:01 IST
Last Updated 3 ಮೇ 2022, 16:01 IST
ಸ್ಮೃತಿ ಇರಾನಿ – ಪಿಟಿಐ ಚಿತ್ರ
ಸ್ಮೃತಿ ಇರಾನಿ – ಪಿಟಿಐ ಚಿತ್ರ   

ವಯನಾಡ್: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ, ಕೇರಳದ ವಯನಾಡ್‌ಗೆ ಭೇಟಿ ನೀಡಿದರು.

ಸ್ಥಳೀಯಾಡಳಿತದ ಜತೆ ಪರಾಮರ್ಶೆ ಸಭೆ ನಡೆಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಇಲ್ಲಿ ಹೆಚ್ಚು ಕೆಲಸವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1.35 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಬಾಕಿ ಇರುವುದು, ಬುಡಕಟ್ಟು ಜನರಲ್ಲಿ ಸಾಮಾನ್ಯವಾಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಲು ಕ್ರಮ ಕೈಗೊಳ್ಳದೇ ಇರುವುದು, ಭೂ ದಾಖಲೆಗಳ ಡಿಜಿಟಲೀಕರಣ ಮಾಡದಿರುವುದು ಹಾಗೂ ಬುಡಕಟ್ಟು ಜನರ ಕೌಶಲಾಭಿವೃದ್ಧಿಗೆ ಕ್ರಮ ಕೈಗೊಳ್ಳದೇ ಇರುವುದನ್ನು ಅವರು ಪ್ರಸ್ತಾಪಿಸಿದರು.

ADVERTISEMENT

ಬುಡಕಟ್ಟು ಜನರ ಜೀವನ ಮಟ್ಟ ಸುಧಾರಿಸಬೇಕಿದೆ. ಜಿಲ್ಲೆಯಲ್ಲಿ ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡಬೇಕು. ಜನರಿಗೆ, ವಿಶೇಷವಾಗಿ ಬಡವರಿಗೆ ಉತ್ತಮ ಆರೋಗ್ಯ, ಶಿಕ್ಷಣ, ಪೌಷ್ಟಿಕಾಹಾರ ಹಾಗೂ ಹಣಕಾಸು ಸೇವೆಗಳನ್ನು ಒದಗಿಸಿಕೊಡಬೇಕು ಎಂದು ಅವರು ಹೇಳಿದರು.

‘ಇಲ್ಲಿ ಅನೇಕ ಕೆಲಸಗಳು ಆಗಬೇಕಿವೆ. ಅವುಗಳನ್ನು ನೆರವೇರಿಸುವುದಾಗಿ ಜಿಲ್ಲಾಡಳಿತ ನನಗೆ ಭರವಸೆ ನೀಡಿದೆ’ ಎಂದು ಅವರು ತಿಳಿಸಿದರು.

‘ನಾನು ರಾಹುಲ್ ಗಾಂಧಿಯಲ್ಲ’

ಪಕ್ಷವು ಸೂಚಿಸಿದರೆ ವಯನಾಡ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಇರಾನಿ ಅವರನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅವರು, ‘ನಾನು ರಾಹುಲ್ ಗಾಂಧಿಯಲ್ಲ. ಅಮೇಥಿಯಿಂದ ಓಡಿಹೋಗುವುದಿಲ್ಲ. ಆದರೆ ಅಮೇಥಿಯಲ್ಲಿ ಮಾಡಿರುವ ಕೆಲಸಗಳನ್ನು ಇಲ್ಲಿಯೂ ಮಾಡುವೆ’ ಎಂದು ಹೇಳಿದರು.

ಜಿಲ್ಲೆಯ 57,000 ರೈತರಿಗೆ ‘ಕಿಸಾನ್ ಕ್ರೆಡಿಟ್ ಕಾರ್ಡ್’ ದೊರೆತಿಲ್ಲ ಹಾಗೂ ಗೃಹ ನಿರ್ಮಾಣ ಯೋಜನೆಗಳು ಬಡವರನ್ನು ತಲುಪುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದೂ ಅವರು ಹೇಳಿದರು.

‘ಪ್ರಧಾನ ಮಂತ್ರಿ ಜಲ ಜೀವನ್ ಮಿಷನ್’ ಅಡಿಯಲ್ಲಿ ಎಲ್ಲ ಮನೆಗಳಿಗೆ 2023ರ ಒಳಗಾಗಿ ನೀರಿನ ಸಂಪರ್ಕ ಕಲ್ಪಿಸಿಕೊಡುವುದಾಗಿ ಜಿಲ್ಲಾಡಳಿತವು ತಮಗೆ ಭರವಸೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.