
ಉನ್ನಾವೊ/ನವದೆಹಲಿ: ಕುಲದೀಪ್ ಸಿಂಗ್ ಸೆಂಗರ್ ಅವರಿಗೆ ವಿಧಿಸಿದ್ದ ಶಿಕ್ಷೆ ಅಮಾನತುಗೊಳಿಸಿ ದೆಹಲಿ ಹೈಕೋರ್ಟ್ ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಸೆಂಗರ್ ಪುತ್ರಿಯರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
‘ನಮ್ಮ ಕುಟುಂಬ ನ್ಯಾಯಕ್ಕಾಗಿ ಕಳೆದ ಎಂಟು ವರ್ಷಗಳಿಂದ ಮೌನವಾಗಿ ಕಾಯುತ್ತಿದೆ. ನ್ಯಾಯಾಲಯಗಳು ಹಾಗೂ ಕಾನೂನು ಪ್ರಕ್ರಿಯೆಯಲ್ಲಿ ಅಚಲ ನಂಬಿಕೆ ಹೊಂದಿದೆ’ ಎಂದು ಕಿರಿಯ ಪುತ್ರಿ ಇಶಿತಾ ಸೆಂಗರ್ ಪೋಸ್ಟ್ ಮಾಡಿದ್ದಾರೆ.
‘ಬಿಜೆಪಿ ಶಾಸಕನ ಮಗಳು ಎಂದಷ್ಟೆ ನನ್ನನ್ನು ಗುರುತಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಾನು ನಿರಂತರವಾಗಿ ದ್ವೇಷ, ನಿಂದನೆ ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ’ ಎಂದೂ ಅಲವತ್ತುಕೊಂಡಿದ್ದಾರೆ.
‘ನನ್ನ ಕುಟುಂಬ ಯಾವುದೇ ವಿನಾಯಿತಿ ಅಥವಾ ಅನುಕಂಪವನ್ನು ಕೇಳುತ್ತಿಲ್ಲ. ಯಾವುದೇ ಒತ್ತಡ ಅಥವಾ ಭಯದಿಂದ ಮುಕ್ತವಾಗಿ ನ್ಯಾಯಾಂಗ ಕಾರ್ಯ ನಿರ್ವಹಿಸಬೇಕು. ಸಾಕ್ಷ್ಯಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು. ನಾವೂ ಸಹ ಮನುಷ್ಯರೇ ಎಂಬುದನ್ನು ಪರಿಗಣಿಸಿ, ನ್ಯಾಯ ನೀಡಿ ಎಂದು ಬೇಡುತ್ತಿದ್ದೇನೆ’ ಎಂದೂ ಇಶಿತಾ ಹೇಳಿದ್ದಾರೆ.
‘ನಾವು ಹೋರಾಡುತ್ತೇವೆ. ಸೋಲು ಒಪ್ಪಿಕೊಳ್ಳುವ ಮಾತೇ ಇಲ್ಲ’ ಎಂದು ಹಿರಿಯ ಪುತ್ರಿ ಐಶ್ವರ್ಯಾ ಸೆಂಗರ್, ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ವಿಡಿಯೊ ಹಂಚಿಕೆ: ಸೆಂಗರ್ ಪರ ಪ್ರದರ್ಶನ ನಡೆಸಲಾಗಿದೆ ಎನ್ನಲಾದ ವಿಡಿಯೊವೊಂದನ್ನು ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.