ADVERTISEMENT

ನನ್ನ ಮನೆಗೆ ಬಂದು ಬೆದರಿಕೆಯೊಡ್ಡಿದ್ದರು: ಉನ್ನಾವ್ ಸಂತ್ರಸ್ತೆಯಿಂದ ಸಿಜೆಐಗೆ ಪತ್ರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 10:36 IST
Last Updated 30 ಜುಲೈ 2019, 10:36 IST
   

ನವದೆಹಲಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಜುಲೈ 28, ಭಾನುವಾರದಂದು ಅಪಘಾತಕ್ಕೀಡಾಗಿತ್ತು.ಸಂತ್ರಸ್ತೆಯನ್ನು ಹತ್ಯೆಗೈಯ್ಯಲು ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್ ನಡೆಸಿದ ಸಂಚು ಇದು ಎಂದು ಸಂತ್ರಸ್ತೆಯ ಅಮ್ಮ ದೂರಿದ್ದಾರೆ.

ಆದಾಗ್ಯೂ, ಅಪಘಾತ ಸಂಭವಿಸುವುದಕ್ಕಿಂತ ಕೆಲವು ದಿನಗಳ ಹಿಂದೆ ತನ್ನ ಮನೆಗೆ ಕೆಲವು ಜನರು ಬಂದು ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರ ಬರೆದಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

'ನನಗೆ ಬೆದರಿಕೆಯೊಡ್ಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಕೆಲವು ಜನರು ನನ್ನ ಮನೆಗೆ ಬಂದು ಪ್ರಕರಣ ವಾಪಸ್ ಪಡೆಯಿರಿ.ಇಲ್ಲದಿದ್ದರೆ ಸುಳ್ಳು ಪ್ರಕರಣ ದಾಖಲಿಸಿ ಇಡೀ ಕುಟುಂಬವನ್ನು ಜೈಲಿಗೆ ಹಾಕುತ್ತೇವೆ ಎಂದು ಬೆದರಿಕೆಯೊಡ್ಡಿದ್ದರು'ಎಂದು ಸಂತ್ರಸ್ತೆ ಜುಲೈ 12ರಂದು ಪತ್ರ ಬರೆದಿದ್ದರು.

ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದು ಈ ಪ್ರಕರಣ ನ್ಯಾಯಾಲಯದಲ್ಲಿದೆ.ಆರೋಪಿ ಸೆಂಗಾರ್ ಜೈಲಿನಲ್ಲಿದ್ದಾರೆ.

ಬೆದರಿಕೆ ಬಗ್ಗೆ ಸಂತ್ರಸ್ತೆಯ ಅಮ್ಮ ಜುಲೈ 13ರಂದು ಉತ್ತರ ಪ್ರದೇಶ ಪೊಲೀಸರಿಗೆ ದೂರು ನೀಡಿದ್ದರು.ಉನ್ನಾವ್ ಪೊಲೀಸರಿಗೆ ಈ ಪತ್ರವನ್ನು ರವಾನಿಸಲಾಗಿದೆ.ಅಪರಿಚಿತ ಜನರು ತಮಗೆ ಬೆದರಿಕೆಯೊಡ್ಡಿದ್ದು, ನನ್ನ ಕುಟುಂಬ ಭಯದಲ್ಲಿದೆ ಎಂದು ಸಂತ್ರಸ್ತೆಯ ಅಮ್ಮ ಈ ಪತ್ರದಲ್ಲಿ ಬರೆದಿದ್ದಾರೆ.

ಜೈಲಿನಲ್ಲಿದ್ದರೂ ಶಾಸಕ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆಯ ಅಮ್ಮ ಆರೋಪಿಸಿದ್ದಾರೆ.

ಈ ಪತ್ರ ಬರೆದ ಕೆಲವೇ ದಿನಗಳಲ್ಲಿ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.ಇದರಲ್ಲಿ ಕುಟುಂಬದ ಇಬ್ಬರು ಸದಸ್ಯರು ಸಾವಿಗೀಡಾಗಿದ್ದು, ಈಕೆಯ ಪರಿಸ್ಥಿತಿ ಗಂಭೀರವಾಗಿದೆ.

ಯಾರು ಈ ಕುಲ್‌ದೀಪ್ ಸೆಂಗಾರ್?
ಬಾಂಗರ್‌ಮವು ಚುನಾವಣಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ ಕುಲ್‌ದೀಪ್ ಸೆಂಗಾರ್. 2017ರಲ್ಲಿ ಈತ ಅತ್ಯಾಚಾರವೆಸಗಿದ್ದರು ಎಂದು ಬಾಲಕಿ ಆರೋಪಿಸಿದ್ದಳು.2018, ಏಪ್ರಿಲ್8 ರಂದು ನ್ಯಾಯ ಒದಗಿಸಿ ಎಂದು ಅವಲತ್ತುಕೊಂಡ ಸಂತ್ರಸ್ತೆಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿವಾಸದ ಮುಂದೆ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಸಂತ್ರಸ್ತೆಯ ಅಪ್ಪ ಜೈಲಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾದರು.ಸೆಂಗಾರ್‌ನ ಸಹೋದರ ಮತ್ತು ಆತ ಅನುಯಾಯಿಗಳು ಹಲ್ಲೆ ನಡೆಸಿ ಸಂತ್ರಸ್ತೆಯ ಅಪ್ಪನನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಇದೆ. ಕೆಲವು ತಿಂಗಳುಗಳ ನಂತರ ಇದೇ ಅತ್ಯಾಚಾರ ಪ್ರಕರಣದ ಸಾಕ್ಷಿ ಮೊಹಮ್ಮದ್ ಯೂನಸ್ ಕೂಡಾ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.