ADVERTISEMENT

ಕೋವಿಡ್‌ ನಿರ್ವಹಣೆ: ಯೋಗಿ ಕಾರ್ಯವೈಖರಿಗೆ ಪ್ರಧಾನಿ ಮೋದಿ ಹೊಗಳಿಕೆ ಸುರಿಮಳೆ

ಪಿಟಿಐ
Published 15 ಜುಲೈ 2021, 19:31 IST
Last Updated 15 ಜುಲೈ 2021, 19:31 IST
ವಾರಾಣಸಿಯಲ್ಲಿ ತಾಯಿ ಮತ್ತು ಮಗು ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ವಾರಾಣಸಿಯಲ್ಲಿ ತಾಯಿ ಮತ್ತು ಮಗು ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ   

ವಾರಾಣಸಿ: ಉತ್ತರ ಪ್ರದೇಶ ಸರ್ಕಾರ ಕೋವಿಡ್‌ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಕೋವಿಡ್‌ ಎರಡನೇ ಅಲೆಯನ್ನು ಅಭೂತಪೂರ್ವವಾಗಿ ನಿಯಂತ್ರಿಸಿದೆ ಎಂದು ಅವರು ಹೇಳಿದ್ದಾರೆ.

ಹಲವಾರು ಯೋಜನೆಗಳ ಶಿಲಾನ್ಯಾಸ ಮತ್ತು ಚಾಲನೆ ಕಾರ್ಯಕ್ರಮಗಳನ್ನು ನೆರವೇರಿಸುವ ಸಲುವಾಗಿ ಅವರು ಗುರುವಾರ ಬೆಳಗ್ಗೆ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಆಗಮಿಸಿದರು. ಈ ವೇಳೆ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

‘ಉತ್ತರ ಪ್ರದೇಶ ಸರ್ಕಾರವು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ನೆಲೆಯಲ್ಲಿ ಆಡಳಿತ ಮಾಡದೇ ಅಭಿವೃದ್ಧಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ’ ಎಂದರು.

ADVERTISEMENT

ಇಚ್ಛಾಶಕ್ತಿಯ ಕೊರತೆಯಿಂದಾಗಿ ಚಿಕ್ಕ ಸಮಸ್ಯೆಗಳೂ ದೈತ್ಯಾಕಾರವಾಗಿ ಕಾಣು‌‌ತ್ತಿದ್ದವು. ಮಿದುಳಿನ ಉರಿಯೂತ
ದಂಥ ಸಮಸ್ಯೆಯನ್ನೂ ಎದುರಿಸಲಾರದಂಥ ಪರಿಸ್ಥಿತಿಯನ್ನು ಉತ್ತರ ಪ್ರದೇಶದ ಜನ ನೋಡಿದ್ದಾರೆ. ಅಂತಹುದರಲ್ಲಿ, ಈ ಶತಮಾನದಲ್ಲಿ ಇಡೀ ಜಗತ್ತನ್ನೇ ಭಾದಿಸುತ್ತಿರುವ ಕೋವಿಡ್‌ ಬಿಕ್ಕಟ್ಟನ್ನು ಎದುರಿಸಲು ಉತ್ತರ ಪ್ರದೇಶ ಮಾಡಿದ ಪ್ರಯತ್ನಗಳು ಶ್ಲಾಘನೀಯ ಎಂದರು.

ಉತ್ತರ ಪ್ರದೇಶದಲ್ಲಿ ಈಗ ಕಾನೂನು ಸುವ್ಯವಸ್ಥೆ ಇದೆ. ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವ ಧೈರ್ಯ ಮಾಡುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈಗ ಹಲವಾರು ಕಲ್ಯಾಣ ಯೋಜನೆಗಳು ಜನರನ್ನು ತಲುಪುತ್ತಿವೆ. ಹೊಸ ಹೂಡಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ವಾರಾಣಸಿ ಅಭಿವೃದ್ಧಿಪಡಿಸುವ ಕೆಲಸಗಳು ಮಹಾದೇವನ ಆಶಿರ್ವಾದದೊಂದಿಗೆ ಮತ್ತು ಜನರ ಪ್ರಯತ್ನದೊಂದಿದೆ ಉತ್ತಮವಾಗಿ ನಡೆಯುತ್ತಿದೆ ಎಂದರು.

₹ 1,500 ಕೋಟಿಯ ಯೋಜನೆಗಳಿಗೆ ಶಿಲಾನ್ಯಾಸ, ಚಾಲನೆ

ಐಐಟಿ–ಬಿಎಚ್‌ಯು ಆವರಣದಲ್ಲಿ ಪ್ರಧಾನಿ ಮೋದಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು ಮತ್ತು ಹಲವಾರು ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರ, ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಆರಂಭವಾಗುತ್ತಿರುವ ಹಲವು ಹಂತಗಳ ವಾಹನ ನಿಲುಗಡೆ , ಗಂಗಾ ನದಿಗೆ ರೊ–ರೊ ಪ್ರಯಾಣಿಕ ದೋಣಿ, ವಾರಾಣಸಿ–ಗಾಜಿಪುರ ಮಧ್ಯೆ ಮೂರು ಪಥದ ಫ್ಲೈಓವರ್‌ ಸೇತುವೆಗೆ ಚಾಲನೆ ನೀಡಿದರು.ಈ ಎಲ್ಲಾ ಯೋಜನೆಗಳ ವೆಚ್ಚ ₹ 744 ಕೋಟಿ ಎಂದು ಅಂದಾಜಿಸಲಾಗಿದೆ.

ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮ್ಮೇಳನಾ ಕೇಂದ್ರ-ರುದ್ರಾಕ್ಷ್‌ ಅನ್ನು ಉದ್ಘಾಟಿಸಿದರು. ಈ ಕೇಂದ್ರವನ್ನು ಜಪಾನ್‌ ಸಹಯೋಗದಲ್ಲಿ ನಿರ್ಮಿಸಲಾಗಿದೆ.

ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೊಕೆಮಿಕಲ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ (ಸಿಐಪಿಇಟಿ) ಮತ್ತು ಜಲ ಜೀವನ ಯೋಜನೆ ಅಡಿ ಹಲವಾರು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಗಳಿಗೆ ₹839 ಕೋಟಿ ತಗುಲಲಿದೆ ಎನ್ನಲಾಗಿದೆ.

ವೈದ್ಯಕೀಯ ಕೇಂದ್ರವಾದ ಕಾಶಿ

ಅತ್ಯಂತ ಕಷ್ಟದ ಸಮಯದಲ್ಲೂ ತಾನು ಹೋರಾಡುವುದನ್ನು ಬಿಡುವುದಿಲ್ಲ ಎಂಬುದನ್ನು ಕಾಶಿ ತೋರಿಸಿಕೊಟ್ಟಿದೆ. ದೇಶದ ಪೂರ್ವವಲಯದಲ್ಲಿ ಕಾಶಿಯು ಪ್ರಮುಖ ವೈದ್ಯಕೀಯ ಕೇಂದ್ರವಾಗಿ ಹೊರಹೊಮ್ಮಿದೆ. ಮೊದಲೆಲ್ಲಾ ವೈದ್ಯಕೀಯ ಚಿಕಿತ್ಸೆಗಾಗಿ ಇಲ್ಲಿಯ ಜನರು ದೆಹಲಿ ಅಥವಾ ಮುಂಬೈಗೆ ಹೋಗುತ್ತಿದ್ದರು. ಆದರೆ ಈಗ ಎಲ್ಲಾ ವೈದ್ಯಕೀಯ ಸೌಲಭ್ಯಗಳೂ ಇಲ್ಲಿಯೇ ಸಿಗುತ್ತಿವೆ. ಕಾಶಿಯು ಕಳೆದ 7 ವರ್ಷಗಳಿಂದ ತನ್ನ ಮೂಲ ಗುರುತನ್ನು ಉಳಿಸಿಕೊಂಡು ಅಭಿವೃದ್ಧಿ ಕಡೆಗೆ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.