ಖುಷಿನಗರ: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಈಗ ದೇಶದ ಜನರ ಹೆಮ್ಮೆಯ ಪ್ರತೀಕ ಎನಿಸಿದೆ. ಈ ಕಾರ್ಯಾಚರಣೆ ನೆನಪಿಗಾಗಿ ನವಜಾತ ಶಿಶುಗಳಿಗೆ ‘ಸಿಂಧೂರ‘ ಎಂದು ನಾಮಕರಣ ಮಾಡಲಾಗುತ್ತಿದೆ.
ಉತ್ತರ ಪ್ರದೇಶದ ಖುಷಿನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೇ 9 ಮತ್ತು 10ರಂದು ಜನಿಸಿದ 17 ಹೆಣ್ಣು ಮಕ್ಕಳಿಗೆ ಸಿಂಧೂರ ಎಂದು ನಾಮಕರಣ ಮಾಡಲಾಗಿದೆ ಎಂದು ಪ್ರಾಂಶುಪಾಲ ಆರ್.ಕೆ.ಶಶಿ ತಿಳಿಸಿದ್ದಾರೆ.
‘ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಲು ನನ್ನ ಮಗುವಿಗೆ ಸಿಂಧೂರ ಎಂದು ಹೆಸರು ಇಟ್ಟಿದ್ದೇನೆ’ ಎಂದು ಖುಷಿನಗರದ ನಿವಾಸಿ ಅರ್ಚನಾ ಶಾಹಿ ಹೆಮ್ಮೆಯಿಂದ ಹೇಳಿದ್ದಾರೆ. ‘ಈ ಪದವು ನಮಗೆ ಸ್ಪೂರ್ತಿದಾಯಕವಾಗಿದೆ’ ಎಂದು ಅವರ ಪತಿ ಅಜಿತ್ ಶಾಹಿ ತಿಳಿಸಿದ್ದಾರೆ.
ಮತ್ತೊಂದು ಮಗುವಿನ ತಂದೆ ಪದ್ರೌನದ ನಿವಾಸಿ ಮದನ್ ಗುಪ್ತಾ, ‘26 ಅಮಾಯಕರನ್ನು ಕೊಂದವರ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಕ್ಷಣದಿಂದಲೇ ಕಾರ್ಯಾಚರಣೆಯ ಹೆಸರನ್ನು ಮಗುವಿಗೆ ಇಡಲು ನನ್ನ ಸೊಸೆ ಬಯಸಿದ್ದರು’ ಎಂದರು.
ವ್ಯಾಸ್‌ಮುನಿ ಎಂಬುವರೂ ತಮ್ಮ ಮಗುವಿಗೆ ಸಿಂಧೂರ ಎಂದು ಹೆಸರು ಇಟ್ಟಿದ್ದು, ‘ಈ ಹೆಸರು ನನ್ನ ಮಗಳಿಗೆ ಸ್ಪೂರ್ತಿ ತುಂಬುತ್ತದೆ. ನನ್ನ ಮಗಳು ಬೆಳೆಯುತ್ತಾ ಈ ಪದದ ಅರ್ಥ ತಿಳಿದುಕೊಂಡು ಭಾರತ ಮಾತೆಯ ಸೇವೆ ಮಾಡಲು ಪ್ರೇರಣೆ ನೀಡುತ್ತದೆ ’ ಎಂದರು.
‘ಸಿಂಧೂರ ಎನ್ನುವುದು ಸರಳ ಪದವಲ್ಲ. ಈಗ ಅದು ನಮ್ಮ ಭಾವನೆಗಳ ಪ್ರತೀಕವಾಗಿದೆ’ ಎಂದು ಪ್ರಿಯಾಂಕ ದೇವಿ ಎಂಬುವರು ತಮ್ಮ ಮಗುವಿಗೆ ಸಿಂಧೂರ ಹೆಸರಿಟ್ಟ ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.