ADVERTISEMENT

ಉತ್ತರ ಪ್ರದೇಶದ ಶಾಲೆಗಳಲ್ಲಿ ಮಕ್ಕಳು ನಿತ್ಯ ಸುದ್ದಿ ಪತ್ರಿಕೆ ಓದುವುದು ಕಡ್ಡಾಯ

ಪಿಟಿಐ
Published 26 ಡಿಸೆಂಬರ್ 2025, 11:34 IST
Last Updated 26 ಡಿಸೆಂಬರ್ 2025, 11:34 IST
   

ಲಖನೌ: ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮಕ್ಕಳನ್ನು ಮೊಬೈಲ್ ಚಟದಿಂದ ದೂರವಿಡಲು ಮತ್ತು ಓದುವ ಸಂಸ್ಕೃತಿ ಬಲಪಡಿಸುವ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥ ಸಾರಥಿ ಸೇನ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಪ್ರತಿ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ದಿನಪತ್ರಿಕೆ ಲಭ್ಯವಾಗುವಂತೆ ನೋಡಿಕೊಳ್ಳುವ ಅಂಶವೂ ಆದೇಶದಲ್ಲಿದೆ.

ADVERTISEMENT

ಶಾಲೆಯ ಬೆಳಗಿನ ಪ್ರಾರ್ಥನಾ ಸಮಯದಲ್ಲಿ 10 ನಿಮಿಷ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪತ್ರಿಕೆಯ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು ಸೇರಿದಂತೆ ಮುಖ್ಯ ಅಂಶಗಳನ್ನು ರೊಟೇಶನ್ ಆಧಾರದಲ್ಲಿ ಓದಬೇಕು.

‘ದಿನದ ಪದ ಅಭ್ಯಾಸ’ವನ್ನು ಸಹ ಕಡ್ಡಾಯಗೊಳಿಸುವ ಅಂಶ ಆದೇಶದಲ್ಲಿ ಇದೆ. ಪತ್ರಿಕೆಯಲ್ಲಿ ಐದು ಕ್ಲಿಷ್ಟ ಶಬ್ದಗಳನ್ನು ಆಯ್ಕೆ ಮಾಡಿ ನೋಟಿಸ್ ಬೋರ್ಡ್‌ಗೆ ಹಾಕಿ ಅವುಗಳ ಉಚ್ಛಾರದ ಅಭ್ಯಾಸ ಮಾಡಬೇಕು.

ಈ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಶಬ್ಧಕೋಶ, ಯೋಚನಾಶಕ್ತಿ, ಏಕಾಗ್ರತೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧಗೊಳಿಸುತ್ತದೆ. ನಕಲಿ ಸುದ್ದಿಗಳ ಬಗ್ಗೆ ಅವರನ್ನು ಸೂಕ್ಷ್ಮಮತಿಗಳಾಗಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪತ್ರಿಕೆಗಳನ್ನು ಓದುವ ಜೊತೆಗೆ ಶಾಲೆಯಲ್ಲೇ ದಿನ ಪತ್ರಿಕೆ ಅಥವಾ ವಾರ ಪತ್ರಿಕೆ ಹೊರತರುವುದು, ಬರವಣಿಗೆ, 9ರಿಂದ 12ನೇ ತರಗತಿಯವರಿಗೆ ಗುಂಪು ಚರ್ಚೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸುಡೊಕು, ಪದಬಂಧ ಸ್ಪರ್ಧೆಗಳ ಆಯೋಜನೆಗೂ ನಿರ್ದೇಶಿಸಲಾಗಿದೆ.

ಅಭಿಯಾನದ ಉದ್ದೇಶ

* ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಶಬ್ದಕೋಶ ವಿಮರ್ಶಾತ್ಮಕ ಚಿಂತನೆ ಏಕಾಗ್ರತೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವುದು

* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು

* ಸುಳ್ಳು ಸುದ್ದಿಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂವೇದನಾಶೀಲಗೊಳಿಸುವುದು ಚಟುವಟಿಕೆಗಳು

* ವಿದ್ಯಾರ್ಥಿಗಳು ಬೆಳಿಗ್ಗೆ ಕನಿಷ್ಠ 10 ನಿಮಿಷ ದಿನಪತ್ರಿಕೆಗಳನ್ನು ಓದಲು ಮೀಸಲಿಡಬೇಕು

* ರಾಷ್ಟ್ರೀಯ ಅಂತರರಾಷ್ಟ್ರೀಯ ಮತ್ತು ಕ್ರೀಡಾ ಸುದ್ದಿಗಳು ಪ್ರಮುಖ ಸಂಪಾದಕೀಯ ಸುದ್ದಿ ಹಾಗೂ ಬೆಳವಣಿಗೆಗಳನ್ನು ಸರದಿಯ ಆಧಾರದ ಮೇಲೆ ಓದಬೇಕು

* ‘ದಿನದ ಪದ’ ಅಭ್ಯಾಸವನ್ನೂ ಪರಿಚಯಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಶಬ್ದ ಭಂಡಾರವನ್ನು ಹೆಚ್ಚಿಸಲು ಪತ್ರಿಕೆಗಳಿಂದ ಐದು ಕಷ್ಟಕರ ಪದಗಳನ್ನು ಆಯ್ಕೆ ಮಾಡಿ ಅವುಗಳ ಅರ್ಥಗಳನ್ನು ವಿವರಿಸಬೇಕು.

* ದಿನಪತ್ರಿಕೆ ಓದುವುದರ ಜೊತೆಗೆ ಶಾಲೆಗಳು ತಮ್ಮ ಸ್ವಂತ ಶಾಲಾ ಪತ್ರಿಕೆಗಳು ಅಥವಾ ನಿಯತಕಾಲಿಕೆಗಳನ್ನು ಪ್ರಕಟಿಸುವುದು

* 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಂಪಾದಕೀಯ ಆಧಾರಿತ ಬರವಣಿಗೆ ಅಥವಾ ಗುಂಪು ಚರ್ಚೆ ನಡೆಸುವುದು

* ಕ್ರಾಸ್‌ವರ್ಡ್‌ ಮತ್ತು ಸುಡೊಕು ಸ್ಪರ್ಧೆ ಆಯೋಜಿಸುವುದು

* ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿ ಹಾಗೂ ಚಿತ್ರದ ತುಣುಕುಗಳನ್ನು ಬಳಸಿಕೊಂಡು ಸ್ಕ್ರ್ಯಾಪ್‌ಬುಕ್ ತಯಾರಿಸುವುದನ್ನು ಉತ್ತೇಜಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.