ADVERTISEMENT

UP Polls: ಬಿಜೆಪಿ ಅಭ್ಯರ್ಥಿ ಎಸ್‌.ಪಿ.ಸಿಂಗ್‌ ಬಘೇಲ್‌ಗೆ 'ಝಡ್‌' ಶ್ರೇಣಿ ಭದ್ರತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 15:20 IST
Last Updated 16 ಫೆಬ್ರುವರಿ 2022, 15:20 IST
 ಸತ್ಯ ಪಾಲ್‌ ಸಿಂಗ್‌ ಬಘೇಲ್‌
ಸತ್ಯ ಪಾಲ್‌ ಸಿಂಗ್‌ ಬಘೇಲ್‌    

ನವದೆಹಲಿ: ಉತ್ತರ ಪ್ರದೇಶದ ಕರ್ಹಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತ್ಯ ಪಾಲ್‌ ಸಿಂಗ್‌ ಬಘೇಲ್‌ ಅವರಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮೂಲಕ 'ಝಡ್‌' ಶ್ರೇಣಿಯ ಭದ್ರತೆ ಒದಗಿಸಿರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಅತ್ತಿಕುಲ್ಲಾಪುರ ಹಳ್ಳಿಯ ಸಮೀಪ ಮಂಗಳವಾರ ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಖಾತೆ ಸಚಿವರಾಗಿರುವ ಎಸ್‌.ಪಿ.ಸಿಂಗ್‌ ಬಘೇಲ್‌ ಅವರ ಭದ್ರತಾ ವಾಹನಗಳ ಮೇಲೆ ದಾಳಿ ನಡೆದಿತ್ತು. ಕಲ್ಲು ತೂರಲಾಗಿತ್ತು ಹಾಗೂ ದೊಣ್ಳೆಗಳಿಂದ ದಾಳಿ ನಡೆಸುವ ಪ್ರಯತ್ನ ನಡೆದಿತ್ತು. ಆ ಘಟನೆಯ ಬೆನ್ನಲ್ಲೇ ಭದ್ರತೆ ಹೆಚ್ಚಿಸಿರುವ ಮಾಹಿತಿ ಹೊರ ಬಂದಿದೆ.

ಸಮಾಜವಾದಿ ಪಕ್ಷದ ಗೂಂಡಾಗಳು ದಾಳಿ ಘಟನೆಯ ಹಿಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯಲ್ಲಿ ಬಘೇಲ್‌ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಆದರೆ, ಅವರ ಭದ್ರತಾ ವಾಹನದ ಕಿಟಕಿ ಗಾಜು ಒಡೆದಿದೆ.

ADVERTISEMENT

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸ್ಪರ್ಧಿಸುತ್ತಿರುವ ಕರ್ಹಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಘೇಲ್‌ ಕಣಕ್ಕಿಳಿದಿದ್ದಾರೆ. ಈ ಹಿಂದೆ ಅವರಿಗೆ 'ವೈ+' ಶ್ರೇಣಿಯ ಭದ್ರತೆ ನೀಡಲಾಗಿತ್ತು.

ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯಲಿದ್ದು, ಅದರ ಪ್ರಚಾರ ಕಾರ್ಯದಲ್ಲಿ ಬಘೇಲ್‌ ತೊಡಗಿಸಿಕೊಂಡಿದ್ದಾರೆ. ಕಲ್ಲು ತೂರಿರುವ ಘಟನೆಯ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.