ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ‘ಭಾರತದ ಕೊಡುಗೆಯಾದ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಮೂಲಕ ಇಡೀ ಜಗತ್ತಿನಲ್ಲಿ ನೈಜ ಸಮಯದಲ್ಲಿ ಶೇ 50ರಷ್ಟು ವಹಿವಾಟು ನಡೆಯುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
79ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು.
‘ನಮ್ಮ ಯುಪಿಐ ವ್ಯವಸ್ಥೆ ಮೂಲಕ ಭಾರತದ ಸ್ವಾವಲಂಬಿತನವನ್ನು ಇಡೀ ಜಗತ್ತೇ ಬೆರಗಿನಿಂದ ನೋಡುತ್ತಿದೆ. 2016ರಲ್ಲಿ ಜಾರಿಗೆ ಬಂದ ಈ ವ್ಯವಸ್ಥೆಯು ವಹಿವಾಟಿನ ಸಂಖ್ಯೆ ಹಾಗೂ ಮೊತ್ತದ ಗಾತ್ರದಲ್ಲೂ ಬೃಹದಾಕಾರವಾಗಿ ಬೆಳೆದಿದೆ’ ಎಂದರು.
‘ಆರ್ಥಿಕ ವರ್ಷ 2025ರಲ್ಲಿ ದಾಖಲೆಯ 18,587 ಕೋಟಿ ವಹಿವಾಟು ನಡೆದಿದೆ. ಇದರ ಒಟ್ಟು ಮೊತ್ತ ₹261 ಲಕ್ಷ ಕೋಟಿಯಾಗಿದೆ. ಕಳೆದ ಜುಲೈನಲ್ಲಿ 1,947 ಕೋಟಿ ವಹಿವಾಟು ನಡೆದಿದೆ. ಆ ಮೂಲಕ ಯುಪಿಐ ಮತ್ತೊಂದು ಮೈಲಿಗಲ್ಲು ಸಾಧಿಸಿದೆ’ ಎಂದಿದ್ದಾರೆ.
‘ಭಾರತದ ಈ ಸರಳ ಪಾವತಿ ವ್ಯವಸ್ಥೆಯು ಸಂಯುಕ್ತ ಅರಬ್ ಸಂಸ್ಥಾನ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್‌ನಲ್ಲಿ ಚಾಲ್ತಿಯಲ್ಲಿದೆ. ಫ್ರಾನ್ಸ್‌ಗೆ ಯುಪಿಐನ ಪ್ರವೇಶ ಐತಿಹಾಸಿಕವಾಗಿದ್ದು, ಐರೋಪ್ಯ ರಾಷ್ಟ್ರದ ಮೊದಲ ಪ್ರವೇಶವಾಗಿದೆ. ಆ ಮೂಲಕ ಭಾರತೀಯರು ಫ್ರಾನ್ಸ್‌ನಲ್ಲಿ ಯಾವುದೇ ತಡೆ ಇಲ್ಲದೆ ಸುಲಭವಾಗಿ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ಬ್ಯಾಂಕರ್‌ಗಳ ಸಂಘವು ಆರಂಭಿಸಿದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಸೂರಿನಡಿ ಚಿಲ್ಲರೆ ಹಣಕಾಸು ವಹಿವಾಟು ವ್ಯವಸ್ಥೆ ನಿರ್ವಹಿಸಲಾಗುತ್ತಿದೆ. ಆ ಮೂಲಕ ನೈಜ ಸಮಯದಲ್ಲಿ ವ್ಯಕ್ತಿಗಳ ನಡುವೆ ಅಥವಾ ವರ್ತಕರೊಂದಿಗೆ ನೇರ ವಹಿವಾಟು ನಡೆಸಿ ವಸ್ತುಗಳನ್ನು ಖರೀದಿಸಬಹುದಾಗಿದೆ’ ಎಂದು ಅವರು ವಿವರಿಸಿದರು.
ಮುದ್ರಾ ಯೋಜನೆ ಕುರಿತೂ ಮಾತನಾಡಿರುವ ನರೇಂದ್ರ ಮೋದಿ, ‘ಈ ಯೋಜನೆ ಮೂಲಕ ಹಲವರು ಪ್ರಯೋಜನ ಪಡೆದುಕೊಂಡಿದ್ದಾರೆ. ಆ ಮೂಲಕ ಪುಟ್ಟದಾಗಿ ವ್ಯವಹಾರ ಆರಂಭಿಸಿದ್ದಾರೆ. ಜತೆಗೆ ಹತ್ತಾರು ಜನಕ್ಕೆ ಉದ್ಯೋಗ ನೀಡಿದ್ದಾರೆ. ಈ ಯೋಜನೆಯಡಿ ₹20 ಲಕ್ಷವರೆಗೂ ಸಾಲ ಪಡೆಯಬಹುದು. ತಯಾರಿಕೆ, ವಹಿವಾಟು ಮತ್ತು ಕೃಷಿಯನ್ನೂ ಒಳಗೊಂಡು ಸೇವಾ ವಲಯದಲ್ಲಿ ವ್ಯಾಪಾರ ಆರಂಭಿಸಹುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.