ADVERTISEMENT

ಟ್ರಂಪ್‌ ಪತ್ನಿ ದೆಹಲಿ ಶಾಲೆ ಭೇಟಿಗೆ ಕೇಜ್ರಿವಾಲ್‌, ಸಿಸೋಡಿಯಾ ಬರಬಹುದು, ಆದರೆ...

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 4:03 IST
Last Updated 24 ಫೆಬ್ರುವರಿ 2020, 4:03 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌    

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರ ದೆಹಲಿ ಸರ್ಕಾರಿ ಶಾಲೆ ಭೇಟಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮತ್ತು ಡಿಸಿಎಂ ಮನೀಷ್‌ ಸಿಸೋಡಿಯಾ ಹಾಜರಾಗಲು ಅಡ್ಡಿ ಇಲ್ಲ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಎಎಪಿ ಸರ್ಕಾರ ಜಾರಿಗೆ ತರತಂದಿರುವ ‘ಹ್ಯಾಪಿನೆಸ್‌ ಕರಿಕ್ಯುಲಮ್‌’ ತರಗತಿಯನ್ನು ವೀಕ್ಷಿಸಲು ಅಮೆರಿಕ ಅಧ್ಯಕ್ಷ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರು ದಕ್ಷಿಣ ದೆಹಲಿ ಸರ್ಕಾರಿ ಶಾಲೆಯೊಂದಕ್ಕೆ ಮಂಗಳವಾರ ಭೇಟಿ ನೀಡುತ್ತಿದ್ದಾರೆ. ಆದರೆ, ಹ್ಯಾಪಿನೆಸ್‌ ಕರಿಕ್ಯುಲಮ್‌ ತರಗತಿಗಳನ್ನು ಶಾಲೆಗಳಲ್ಲಿ ಜಾರಿಗೆ ತಂದ ಕೀರ್ತಿ ಹೊತ್ತ ಎಎಪಿ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಈ ಸಂಗತಿ ಚರ್ಚೆಗೆ ಕಾರಣವಾಗಿತ್ತು.

ಈ ಕುರಿತು ಆರಂಭದಲ್ಲಿ ಪ್ರತಿಕ್ರಿಯೆ ನೀಡದ ಅಮೆರಿಕ ರಾಯಭಾರ ಕಚೇರಿ ಸದ್ಯ ಟ್ರಂಪ್‌ ದಂಪತಿ ಇನ್ನೇನು ಭಾರತಕ್ಕೆ ಕಾಲಿಡಲಿದ್ದಾರೆ ಎನ್ನುವಾಗಲೇ ಸ್ಪಷ್ಟನೆ ಕೊಟ್ಟಿದೆ.

ADVERTISEMENT

‘ದೆಹಲಿ ಮುಖ್ಯಮಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರು ಮೆಲಾನಿಯಾ ಅವರ ಶಾಲಾ ಭೇಟಿ ಕಾರ್ಯಕ್ರಮಕ್ಕೆ ಹಾಜರಾಗಲು ಯಾವುದೇ ನಿರ್ಬಂಧಗಳಿಲ್ಲ. ಆದರೆ, ಇದು ರಾಜಕೀಯ ಕಾರ್ಯಕ್ರಮವಲ್ಲ. ಮುಖ್ಯವಾಗಿ ಇಲ್ಲಿ ಶಿಕ್ಷಣ, ಶಾಲೆ, ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸುವುದು ಉತ್ತಮ,’ ಎಂದು ರಾಯಭಾರ ಕಚೇರಿಯ ವಕ್ತಾರ ತಿಳಿಸಿದ್ದಾರೆ.

ಟ್ರಂಪ್‌ ಪತ್ನಿ ಶಾಲಾ ಭೇಟಿ ಕುರಿತು ಈ ಮೊದಲು ಮಾತನಾಡಿದ್ದ ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ, ’ ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರನ್ನು ಆಮಂತ್ರಿಸಿಕೊಂಡು, ಹ್ಯಾಪಿನೆಸ್‌ ಕರಿಕ್ಯುಮ್‌ ತರಗತಿಗಳ ಬಗ್ಗೆ ವಿವರಿಸಲು ಉತ್ಸುಕರಾಗಿದ್ದೇವೆ,’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.