
ಚೆನ್ನೈ: ‘ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿರುವುದರಿಂದ ತಮಿಳುನಾಡಿನ ಸಿದ್ಧ ಉಡುಪುಗಳ ರಫ್ತು ಕ್ಷೇತ್ರವು ತೀವ್ರ ಸಂಕಷ್ಟದಲ್ಲಿದ್ದು, ಅಂದಾಜು ₹15 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ, ದ್ವಿಪಕ್ಷೀಯ ಒಪ್ಪಂದದಡಿ ಸುಂಕ ತಗ್ಗಿಸುವ ನಿರ್ಣಯ ಕೈಗೊಳ್ಳಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಗ್ರಹಿಸಿದ್ದಾರೆ.
ಭಾರತದ ಸಿದ್ಧ ಉಡುಪುಗಳ ರಾಜಧಾನಿ ಎಂದೇ ತಿರುಪ್ಪೂರು ಹೆಸರಾಗಿದೆ. ಇಲ್ಲಿ ಮಾತ್ರವಲ್ಲ, ಕೊಯಮತ್ತೂರು, ಈರೋಡ್, ಕರೂರು ಜಿಲ್ಲೆಗಳಲ್ಲೂ ಪ್ರತಿ ದಿನ ಸಿದ್ಧ ಉಡುಪು ರಫ್ತುದಾರರು ಅಂದಾಜು ₹60 ಕೋಟಿಯಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಸ್ಟಾಲಿನ್ ಅವರು ಪ್ರಧಾನಿಯವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಂಕ ಏರಿಕೆ ಬೆನ್ನಲ್ಲೇ ಸಿದ್ಧ ಉಡುಪುಗಳ ಬೇಡಿಕೆ ಮತ್ತು ತಯಾರಿಕೆ ಶೇ 30ರಷ್ಟು ತಗ್ಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಲವು ಘಟಕಗಳು ಈಗಾಗಲೇ ಬಾಗಿಲು ಮುಚ್ಚಿವೆ. ಸುಂಕ ನೀತಿ ಹೀಗೆಯೇ ಮುಂದುವರಿದರೆ ಅದು ದೇಶದ ಒಟ್ಟಾರೆ ರಫ್ತು ಉದ್ಯಮ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸುವುದು ಅಗತ್ಯ ಎಂದು ಮನವಿ ಮಾಡಿದ್ದಾರೆ.
ದೇಶದ ಜವಳಿ ರಫ್ತಿನಲ್ಲಿ ತಮಿಳುನಾಡಿನ ಪಾಲು ಶೇ 28
ಚರ್ಮ, ಪಾದರಕ್ಷೆ ರಫ್ತಿನಲ್ಲಿ ತಮಿಳುನಾಡಿನ ಪಾಲು ಶೇ 40
ಜವಳಿ ವಲಯದ ಕಾರ್ಮಿಕರ ಸಂಖ್ಯೆ 75 ಲಕ್ಷ
ಚರ್ಮೋದ್ಯಮದಲ್ಲಿ ತೊಡಗಿರುವ ಕಾರ್ಮಿಕರ ಸಂಖ್ಯೆ 10 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.