ADVERTISEMENT

ಅಮೆರಿಕ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ’ ಭಾಗವಾಗದ ಭಾರತ: ಮೋದಿ ವಿರುದ್ಧ ಕಾಂಗ್ರೆಸ್

ಪಿಟಿಐ
Published 13 ಡಿಸೆಂಬರ್ 2025, 14:01 IST
Last Updated 13 ಡಿಸೆಂಬರ್ 2025, 14:01 IST
<div class="paragraphs"><p>ನರೇಂದ್ರ ಮೋದಿ, ಜೈರಾಮ್‌ ರಮೇಶ್</p></div>

ನರೇಂದ್ರ ಮೋದಿ, ಜೈರಾಮ್‌ ರಮೇಶ್

   

ನವದೆಹಲಿ: ಭಾರತವು, ಸಿಲಿಕಾನ್‌ ಪೂರೈಕೆ ಅಬಾಧಿತವಾಗಿರುವುದನ್ನು ಖಾತ್ರಿಪಡಿಸಲು ಅಮೆರಿಕ ನೇತೃತ್ವದಲ್ಲಿ ರಚನೆಯಾಗಲಿರುವ ಗುಂಪಿನ (ಪ್ಯಾಕ್ಸ್‌ ಸಿಲಿಕಾ) ಭಾಗವಾಗಿಲ್ಲ ಎಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ಟೀಕಾಪ್ರಹಾರ ನಡೆಸಿದೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಪ್ರಧಾನಿ ಮೋದಿ ನಡುವಿನ ಒಪ್ಪಂದಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ. ಒಂದು ವೇಳೆ ಈ ಗುಂಪಿನ ಭಾಗವಾಗಿದ್ದಲ್ಲಿ ಭಾರತಕ್ಕೆ ಸಾಕಷ್ಟು ಅನುಕೂಲವಾಗುತ್ತಿತ್ತು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

ADVERTISEMENT

ಹಲವು ಉದ್ದಿಮೆಗಳಿಗೆ ಅಗತ್ಯವಿರುವ ಸಿಲಿಕಾನ್‌ ಧಾತುವಿನ ತಡೆರಹಿತ ಪೂರೈಕೆ ಉದ್ದೇಶದಿಂದ ಅಮೆರಿಕ ಸೇರಿ ಒಂಬತ್ತು ದೇಶಗಳು ಒಪ್ಪಂದ ಮಾಡಿಕೊಂಡಿವೆ. ಇದನ್ನು ‘ಪ್ಯಾಕ್ಸ್‌ ಸಿಲಿಕಾ’ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಚೀನಾ ಪ್ರಾಬಲ್ಯ ಹೊಂದಿದ್ದು, ಅದಕ್ಕೆ ಪ್ರತಿಯಾಗಿ ಈ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಅಮೆರಿಕ, ಜಪಾನ್‌, ದಕ್ಷಿಣ ಕೊರಿಯಾ, ಸಿಂಗಪುರ, ನೆದರ್ಲೆಂಡ್ಸ್, ಬ್ರಿಟನ್, ಇಸ್ರೇಲ್, ಯುಎಇ ಹಾಗೂ ಆಸ್ಟ್ರೇಲಿಯಾ ಈ ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ.

ಈ ಕುರಿತು ಜೈರಾಮ್‌ ರಮೇಶ್‌ ಅವರು ‘ಎಕ್ಸ್‌’ನಲ್ಲಿ ವಿಸ್ತಾರವಾದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

‘ಟ್ರಂಪ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಗ್ಗೆ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಉತ್ಸಾಹದಿಂದಲೇ ಮಾಹಿತಿ ಹಂಚಿಕೊಂಡಿದ್ದಾರೆ. ಅಹಮದಾಬಾದ್‌, ಹ್ಯೂಸ್ಟನ್ ಹಾಗೂ ವಾಷಿಂಗ್ಟನ್‌ನಲ್ಲಿ ತಮ್ಮ ಆಪ್ತ ಸ್ನೇಹಿತನನ್ನು ಮೋದಿ ಹಲವು ಬಾರಿ ಆಲಿಂಗನ ಮಾಡಿದ್ದಾರೆ. ಇಷ್ಟಾದರೂ, ಭಾರತ ಈ ಗುಂಪಿನ ಭಾಗವಾಗಿಲ್ಲ’ ಎಂದು ಜೈರಾಮ್‌ ರಮೇಶ್‌ ಕುಟುಕಿದ್ದಾರೆ.

‘ಭಾರತವನ್ನು ಒಂಬತ್ತು ದೇಶಗಳ ಈ ಗುಂಪಿನಿಂದ ಹೊರಗೆ ಇಟ್ಟಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಆದರೆ, ಈ ಗುಂಪಿನ ಭಾಗವಾಗಿದ್ದಲ್ಲಿ ನಮಗೆ ಬಹಳಷ್ಟು ಅನುಕೂಲವಾಗುತ್ತಿತ್ತು’ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.