ರಾಹುಲ್ ಗಾಂಧಿ
ಪಿಟಿಐ ಚಿತ್ರ
ಲಖನೌ: 'ಭಾರತ್ ಜೋಡೊ' ಯಾತ್ರೆ ವೇಳೆ ಸೇನಾಪಡೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶ ನ್ಯಾಯಾಲಯ ಮಂಗಳವಾರ ಸಮನ್ಸ್ ನೀಡಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಅಲೋಖ್ ವರ್ಮಾ ಅವರು, ಪ್ರಕರಣದ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದ್ದು, ಅಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ರಾಹುಲ್‌ಗೆ ಸೂಚಿಸಿದ್ದಾರೆ.
ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ) ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಸ್ತವ ಅವರ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ರಾಹುಲ್ ಅವರು ಭಾರತ್ ಜೋಡೊ ಯಾತ್ರೆಯ ವೇಳೆ 2022ರ ಡಿಸೆಂಬರ್ 16ರಂದು ಸೇನೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ 2022ರ ಡಿಸೆಂಬರ್ 9ರಂದು ನಡೆದಿದ್ದ ಸಂಘರ್ಷದ ಕುರಿತು ಮಾಧ್ಯಮವರೊಂದಿಗೆ ಮಾತನಾಡುತ್ತಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ವಿವೇಕ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಹೇಳಿಕೆಗಳಿಂದ ಭಾರತೀಯ ಸೇನೆಗೆ ಅವಮಾನವಾಗಿದೆ ಎಂದು ದೂರುದಾರರು ಆರೋಪಿಸಿರುವುದಾಗಿಯೂ ವಕೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.