ADVERTISEMENT

ಅಯೋಧ್ಯೆಗೆ ಪವನ್‌ ಪಾಂಡೆ ಎಸ್‌ಪಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಕುರಿತು ಕುತೂಹಲ

ಪಿಟಿಐ
Published 26 ಜನವರಿ 2022, 19:31 IST
Last Updated 26 ಜನವರಿ 2022, 19:31 IST
ಅಖಿಲೇಶ್‌ ಯಾದವ್‌ (ಸಾಂದರ್ಭಿಕ ಚಿತ್ರ)
ಅಖಿಲೇಶ್‌ ಯಾದವ್‌ (ಸಾಂದರ್ಭಿಕ ಚಿತ್ರ)   

ಲಖನೌ: ಕುತೂಹಲ ಮೂಡಿಸಿರುವ ಅಯೋಧ್ಯೆ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷವು(ಎಸ್‌ಪಿ) ಮಂಗಳವಾರತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಅಖಿಲೇಶ್‌ ಯಾದವ್‌ ಸರ್ಕಾರದಲ್ಲಿ ಹಿಂದೆ ಸಚಿವರಾಗಿದ್ದ ಪವನ್‌ ಪಾಂಡೆ ಅವರಿಗೆ ಟಿಕೆಟ್‌ ನೀಡಿದೆ.

ತೇಜ್‌ ನಾರಾಯಣ್ ಪಾಂಡೆ ಅಲಿಯಾಸ್ ಪವನ್‌ ಪಾಂಡೆ ಅವರು 2012ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಯೋಧ್ಯೆಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ 2017ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೇದ್ ಪ್ರಕಾಶ್ ಗುಪ್ತಾ ಅವರ ಎದುರು ಸೋತಿದ್ದರು. ಆದರೆ, ಈ ಬಾರಿಯೂ ಪಾಂಡೆ ಅವರನ್ನೇ ಅಯೋಧ್ಯೆಯಿಂದ ಕಣಕ್ಕಿಳಿಸಲು ಎಸ್‌ಪಿ ನಿರ್ಧರಿಸಿದೆ.

ಬಿಜೆಪಿ ತೊರೆದು ಎಸ್‌ಪಿ ಸೇರಿರುವ ಮಾಧುರಿ ವರ್ಮಾ ಅವರನ್ನು ನನ್ಪಾರಾ ಕ್ಷೇತ್ರದಿಂದ ಕಣಕ್ಕಿಳಿಸಲು ಎಸ್‌ಪಿ ನಿರ್ಧರಿಸಿದೆ.

ADVERTISEMENT

ಎಸ್‌ಪಿ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ, ಯಾವ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಕತೂಹಲ ಹೆಚ್ಚಾಗಿದೆ. ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್‌ ಕೂಡ ಅಯೋಧ್ಯೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಲಿ ಶಾಸಕ ವೇದ್‌ ಪ್ರಕಾಶ್‌ ಗುಪ್ತಾ ಅವರನ್ನೇ ಈ ಬಾರಿಯೂ ಬಿಜೆಪಿ ಕಣಕ್ಕಿಳಿಸಲಿದೆಯೇ ಎಂಬ ಪ್ರಶ್ನೆ ಬೆಂಬಲಿಗರಲ್ಲಿ ಮನೆಮಾಡಿದೆ.

ವೇದ್‌ ಪ್ರಕಾಶ್‌ ವಿರುದ್ಧ ಅಲೆ:ಕ್ಷೇತ್ರದ ಜನರಿಗೆ ವೇದ್‌ ಪ್ರಕಾಶ್‌ ಕುರಿತು ಉತ್ತಮ ಅಭಿಪ್ರಾಯವಿಲ್ಲ ಎಂದು ಹೇಳಲಾಗಿದೆ.

‘ವೇದ್‌ ಪ್ರಕಾಶ್‌ ಅವರ ಕುರಿತು ಮತದಾರರು ಅಸಮಾಧಾನ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಬದಲಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಶಾಸಕ ವೇದ್‌ ಪ್ರಕಾಶ್‌ ವ್ಯಾಪಾರಿ ಸಮುದಾಯದವರೇ ಆಗಿದ್ದರೂ ವ್ಯಾಪಾರಿ ಸಮುದಾಯದ ಪರ ಸರ್ಕಾರದ ಎದುರು ಧ್ವನಿ ಎತ್ತುವಲ್ಲಿ ಸೋತಿದ್ದಾರೆ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದ್ದಾರೆ. ಇನ್ನೂ ಹಲವರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಸ್ವಾಗತಿಸಿದ್ದಾರೆ.

1991ರಿಂದ 2007ರವರೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಿಂದ ಬಿಜೆಪಿಯ ಈಗಿನ ಸಂಸದ ಲುಲ್ಲಾ ಸಿಂಗ್‌ ಗೆದ್ದಿದ್ದರು. 2012ರ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಪವನ್‌ ಪಾಂಡೆ ಎದುರು ಸೋತಿದ್ದರು.

ಫೆ.27ರಂದು ಅಯೋಧ್ಯೆಗೆ ಚುನಾವಣೆ ನಡೆಯಲಿದೆ. ಅಯೋಧ್ಯೆ ಕ್ಷೇತ್ರದಲ್ಲಿ ಶೇ 13–15ರಷ್ಟು ಬ್ರಾಹ್ಮಣ, ಯಾದವ ಮತದಾರರು ಮತ್ತು ಶೇ 18–20ರಷ್ಟು ಮುಸ್ಲಿಂ ಮತದಾರರಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಿಂದ ಸ್ಪರ್ಧಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅವರು ಗೋರಖಪುರ ನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಕ್ಷ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.