
ಸಾವು
(ಪ್ರಾತಿನಿಧಿಕ ಚಿತ್ರ)
ಬಾರಾಬಂಕಿ (ಉತ್ತರ ಪ್ರದೇಶ): ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದಲ್ಲದೇ, ಯೂಟ್ಯೂಬ್‌ನಲ್ಲಿನ ವಿಡಿಯೊ ನೋಡಿಕೊಂಡು ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಕ್ಲಿನಿಕ್ ಮಾಲೀಕ ಮತ್ತು ಆಯುರ್ವೇದ ಆಸ್ಪತ್ರೆಯ ಉದ್ಯೋಗಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾರಾಬಂಕಿ ಜಿಲ್ಲೆಯ ಕೋಠಿ ಪಟ್ಟಣದಲ್ಲಿ ಡಿ.5ರಂದು ಈ ಘಟನೆ ನಡೆದಿದೆ. ತೆಹಬಹಾದೂರ್ ರಾವತ್ ಅವರ ಪತ್ನಿ ಮುನಿಶ್ರ ರಾವತ್ ಶಸ್ತ್ರಚಿಕಿತ್ಸೆಯ ನಂತರ ಮೃತಪಟ್ಟಿರುವ ಮಹಿಳೆ. ಯಾವುದೇ ಮಾನ್ಯತೆ ಇಲ್ಲದೇ ಕ್ಲಿನಿಕ್ ನಡೆಸುತ್ತಿದ್ದ ಮಾಲೀಕ ಜ್ಞಾನಪ್ರಕಾಶ್ ಮಿಶ್ರಾ ಮತ್ತು ಅವರ ಸೋದರ ಅಳಿಯ ವಿವೇಕ್ ಕುಮಾರ್ ಮಿಶ್ರಾ ವಿರುದ್ಧ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ‘ತೆಹಬಹದೂರ್ ಅವರು, ಹೊಟ್ಟೆನೋವು ಸಮಸ್ಯೆಯಿಂದ ಬಳಲುತ್ತಿದ್ದ ಮುನಿಶ್ರ ಅವರನ್ನು ಚಿಕಿತ್ಸೆಗಾಗಿ ಕೋಠಿ ಪಟ್ಟಣದ ಶ್ರೀದಾಮೋದರ್ ಔಷಧಾಲಯಕ್ಕೆ ಕರೆದೊಯ್ದಿದ್ದರು. ಇವರನ್ನು ಪರೀಕ್ಷೆ ನಡೆಸಿದ ಕ್ಲಿನಿಕ್ ನಿರ್ವಾಹಕ ಜ್ಞಾನ್‌ಪ್ರಕಾಶ್ ಮಿಶ್ರಾ, ‘ಮುನಿಶ್ರ ಅವರಿಗೆ ಹೊಟ್ಟೆಯಲ್ಲಿ ಕಲ್ಲುಗಳಿದ್ದು, ಇದೇ ನೋವಿಗೆ ಕಾರಣ. ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಅದಕ್ದೆ ಅಂದಾಜು ₹25 ಸಾವಿರ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೂ ಮುನ್ನ ಪತಿ ತೆಹಬಹದೂರ್, ಮುಂಗಡವಾಗಿ ₹20 ಸಾವಿರ ನೀಡಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
‘ಜ್ಞಾನ್‌ಪ್ರಕಾಶ್ ಮಿಶ್ರಾ ಶಸ್ತ್ರಚಿಕಿತ್ಸೆ ನಡೆಸುವಾಗ ಮದ್ಯದ ಅಮಲಿನಲ್ಲಿದ್ದರು. ಯೂಟ್ಯೂಬ್‌ನಲ್ಲಿನ ವಿಡಿಯೊವನ್ನು ನೋಡಿದ ನಂತರ ಪತ್ನಿಗೆ ಶಸ್ತ್ರಚಿಕಿತ್ಸೆ ಆರಂಭಿಸಿದರು. ಶಸ್ತ್ರಚಿಕಿತ್ಸೆಯ ವೇಳೆ ಪತ್ನಿಯ ಹೊಟ್ಟೆಯಲ್ಲಿನ ರಕ್ತನಾಳಗಳನ್ನು ಕತ್ತರಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆದ ಮರುದಿನ(ಡಿ.6) ಸಂಜೆ ಪತ್ನಿ ಸಾವನ್ನಪ್ಪಿದರು. ಜ್ಞಾನಪ್ರಕಾಶ್ ಅಳಿಯ ವಿವೇಕ್ ಮಿಶ್ರಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೆರವಾಗಿದ್ದರು’ ಎಂದು ತೆಹಬಹದೂರ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
‘ಘಟನೆಗೆ ಸಂಬಂಧಿಸಿದಂತೆ ಕ್ಲಿನಿಕ್ ನಿರ್ವಾಹಕ ಮತ್ತು ಸೋದರಳಿಯನ ವಿರುದ್ಧ ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಬ್ಬರೂ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆ’ ಪೊಲೀಸರು ತಿಳಿಸಿದ್ದಾರೆ.
ವಿವೇಕ್ ಕುಮಾರ್ ಮಿಶ್ರಾ ರಾಯ್‌ಬರೇಲಿಯ ಆಯುರ್ವೇದ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದು, ಸರ್ಕಾರಿ ಕೆಲಸದ ನೆಪದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿವೇಕ್ ಕುಮಾರ್ ಮಿಶ್ರಾ, ರಾಯ್‌ಬರೇಲಿಯ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಹಲವು ವರ್ಷಗಳಿಂದ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು. ಘಟನೆಯ ನಂತರ ಕೋಠಿ ಸಮುದಾಯ ಆರೋಗ್ಯ ಕೇಂದ್ರದ ಸೂಪರಿಂಟೆಂಡ್ ಸಂಜೀವ್ ಕುಮಾರ್ ಅವರು, ಅಕ್ರಮವಾಗಿ ನಡೆಸುತ್ತಿದ್ದ ಕ್ಲಿನಿಕ್‌ಗೆ ಬೀಗ ಹಾಕಿದರು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.