ADVERTISEMENT

ತಾಜ್‌ ಮಹಲ್‌ನ್ನು ತೇಜೋಲಯ್ ಎಂದು ಮರುನಾಮಕರಣ ಮಾಡಲು ಬಿಜೆಪಿ ನಾಯಕರ ಒತ್ತಾಯ

ಸಂಜಯ ಪಾಂಡೆ
Published 15 ಸೆಪ್ಟೆಂಬರ್ 2020, 15:22 IST
Last Updated 15 ಸೆಪ್ಟೆಂಬರ್ 2020, 15:22 IST
ತಾಜ್ ಮಹಲ್
ತಾಜ್ ಮಹಲ್    

ಲಖನೌ:ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ 'ಮೊಘಲ್ ಮ್ಯೂಸಿಯಂ'ಗೆ ಶಿವಾಜಿ ಮಹಾರಾಜರ ಹೆಸರಡಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.

ಮೊಘಲರು ಎಂದಿಗೂ ನಮ್ಮ ಹೀರೊಗಳಾಗಲು ಸಾಧ್ಯವಿಲ್ಲ, ಶಿವಾಜಿಯೇ ನಮ್ಮ ನಿಜವಾದ ಹೀರೊ. ಅವರ ಹೆಸರು ನಮಲ್ಲಿ ದೇಶಪ್ರೇಮದ ಭಾವನೆ ಮೂಡುವಂತೆ ಮಾಡುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

'ಮೊಘಲ್ ಮ್ಯೂಸಿಯಂ' ಯೋಜನೆಯು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ಯಾದವ್ ಅವರ ಕನಸಿನ ಕೂಸು ಆಗಿತ್ತು.2016ರಲ್ಲಿ ಈ ಯೋಜನೆ ಆರಂಭವಾಗಿತ್ತು. ಈ ಮ್ಯೂಸಿಯಂನಲ್ಲಿ ಮೊಘಲ್ ಮತ್ತುಬ್ರಜ್ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತದೆ.

ಆದಾಗ್ಯೂ, ಮ್ಯೂಸಿಯಂ ಹೆಸರು ಬದಲಿಸುವ ವಿಷಯವನ್ನು ಮುನ್ನೆಲೆಗೆ ತಂದು ರಾಜ್ಯದಲ್ಲಿನ ನಿರುದ್ಯೋಗ, ಕಾನೂನು ಅವ್ಯವಸ್ಥೆ ಸಮಸ್ಯೆಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ ಎಂದು ವಿಪಕ್ಷ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಆರೋಪಿಸಿದೆ.

ADVERTISEMENT

ಬಿಜೆಪಿ ಅಧಿಕಾರಕ್ಕೇರಿದಂದಿನಿಂದ ಸ್ಥಳಗಳ ಮತ್ತು ಕಟ್ಟಡಗಳ ಮರುನಾಮಕರಣ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ಟೀಕಿಸಿದ್ದಾರೆ.

ಮೊಘಲ್ ಮ್ಯೂಸಿಯಂ ಮರುನಾಮಕರಣ ನಿರ್ಧಾರವನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವಿಸ್ ಮತ್ತು ನಟಿ ಕಂಗನಾ ರನೌತ್ ಬೆಂಬಲಿಸಿದ್ದಾರೆ.

ಇದರ ಬೆನ್ನಲ್ಲೇ ಆಗ್ರಾದಲ್ಲಿ ಯಮುನಾ ನದಿ ತಟದಲ್ಲಿರುವ ತಾಜ್ ಮಹಲ್‌ ಹೆಸರನ್ನು ತೇಜೊಲಯ್ ಅಥವಾ ತೇಜೊಮಹಲ್ ಎಂದು ಮರುನಾಮಕರಣ ಮಾಡುವಂತೆಕೆಲವು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ವಿಳಂಬ ಮಾಡದೆ ತಾಜ್ ಮಹಲ್ ಹೆಸರನ್ನು ತೇಜೋಲಯ್ ಎಂದು ಬದಲಿಸಬೇಕು ಎಂದು ಬಿಜೆಪಿ ನಾಯಕ, ಉತ್ತರ ಪ್ರದೇಶ ಗೋ ಸೇವಾ ಆಯೋಗದ ಸದಸ್ಯರೂ ಆಗಿರುವ ಭೋಲೇ ಸಿಂಗ್ ಹೇಳಿದ್ದಾರೆ. ತಾಜ್ ಮಹಲ್ ಶಿವ ದೇವಾಲಯ ಆಗಿತ್ತು. ಹಾಗಾಗಿ ಅದರ ಹೆಸರನ್ನು ತೇಜೊಲಯ್ ಎಂದು ಬದಲಿಸಬೇಕು ಎಂದು ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ವಿನಯ್ ಕಟಿಯಾರ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.