ಡೆಹ್ರಾಡೂನ್: ಭಾರಿ ಮಳೆ ಮತ್ತು ಮೇಘಸ್ಫೋಟದಿಂದಾಗಿ ಉತ್ತರಾಖಂಡದ ಹಲವು ಜಿಲ್ಲೆಗಳು ತತ್ತರಿಸಿದ್ದು, ಶುಕ್ರವಾರ ಮುಂಜಾನೆ ಐವರು ಮೃತಪಟ್ಟಿದ್ದಾರೆ.
ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಚಮೋಲಿ, ರುದ್ರಪ್ರಯಾಗ, ತೆಹ್ರಿ ಮತ್ತು ಬಾಗೇಶ್ವರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಬಾಗೇಶ್ವರ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಇಬ್ಬರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಯಲ್ಲಿ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ. ರುದ್ರಪ್ರಯಾಗದ ಆರಕ್ಕೂ ಹೆಚ್ಚು ಗ್ರಾಮಗಳಿಗೆ ಹಾನಿಯಾಗಿದೆ. 30ರಿಂದ 40 ಕುಟುಂಬಗಳು ಅವಶೇಷಗಳಡಿ ಮತ್ತು ಪ್ರವಾಹದಲ್ಲಿ ಸಿಲುಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರಂತರ ಮಳೆಯಿಂದಾದ ಅಲಕಾನಂದ, ಮಂದಾಕಿನಿ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ನದಿ ಪಾತ್ರದಲ್ಲಿನ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಚೆನಗಢ ಪ್ರದೇಶದಲ್ಲಿ ಹಲವು ನೇಪಾಳಿಗರು ಮತ್ತು ನಾಲ್ವರು ಸ್ಥಳೀಯರು ಅವಶೇಷಗಳಡಿ ಸಿಲುಕಿದ್ದಾರೆ. 7ರಿಂದ 8 ಕಡೆಗಳಲ್ಲಿ ರಸ್ತೆ ಕುಸಿತವಾಗಿರುವುದರಿಂದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತದಿಂದಾಗಿ ಬದರೀನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ. ಕೇದರನಾಥ ಹೆದ್ದಾರಿ ಕೂಡ ಬಂದ್ ಆಗಿದೆ. ವಾಹನ ಸಂಚಾರ ಪುನರಾರಂಭಗೊಂಡಿರುವುದು ಖಚಿತವಾದ ಬಳಿಕ ಭಕ್ತರು ಬರಬಹುದು ಎಂದು ಸ್ಥಳೀಯಾಡಳಿತ ಮನವಿ ಮಾಡಿದೆ.
ಬಾಗೇಶ್ವರ ಚಮೋಲಿ ಡೆಹ್ರಾಡೂನ್ ಮತ್ತು ರುದ್ರಪ್ರಯಾಗ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆಯಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆಯಾಗಿದೆ.
ಚಮೋಲಿ ಹಾಗೂ ರುದ್ರಪ್ರಯಾಗದ ಕೆಲವೆಡೆ ಮೇಘಸ್ಫೋಟ ಹಾಗೂ ಭೂಕುಸಿತ ಸಂಭವಿಸಿದ್ದು, ಕೆಲವು ಕುಟುಂಬಗಳು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳೀಯ ಆಡಳಿತದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೈಸರ್ಗಿಕ ವಿಕೋಪಗಳಿಂದ ರಾಜ್ಯ (ಉತ್ತರಾಖಂಡ) ತತ್ತರಿಸಿದೆ. ಆಗಸ್ಟ್ 5ರಂದು ಖೀರಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ದಿಢೀರ್ ಪ್ರವಾಹ ಉಂಟಾಗಿ, ಐವರು ಮೃತಪಟ್ಟು, ಇತರ 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.