ಗೋಪೇಶ್ವರ(ಉತ್ತರಾಖಂಡ): ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ನಾಲ್ಕು ಹಳ್ಳಿಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಭೂಕುಸಿತ ಸಂಭವಿಸಿದ್ದು, 30ಕ್ಕೂ ಅಧಿಕ ಮನೆಗಳು ಉರುಳಿವೆ. 14 ಮಂದಿ ನಾಪತ್ತೆಯಾಗಿದ್ದು, ಅವರು ಮಣ್ಣಿನಡಿ ಸಿಲುಕಿರುವ ಸಂಶಯ ವ್ಯಕ್ತವಾಗಿದೆ. ಇನ್ನೂ 20 ಮಂದಿಗೆ ಗಾಯಗಳಾಗಿವೆ.
ಈ ನಾಲ್ಕು ಹಳ್ಳಿಗಳು ನಂದನಗರ ಪ್ರದೇಶದಲ್ಲಿ ಬರುತ್ತಿದ್ದು, ಡೆಹ್ರಾಡೂನ್‌ನಿಂದ 260 ಕಿ.ಮೀ ಮತ್ತು ಚಮೋಲಿಯಿಂದ 50 ಕಿ.ಮೀ ದೂರದಲ್ಲಿವೆ. ನಂದನಗರ ಪ್ರದೇಶದಲ್ಲಿ ಭೂಕುಸಿತವು ಈಗಾಗಲೇ ಭಾರಿ ಅವಾಂತರ ಸೃಷ್ಟಿಸಿದೆ.
ಕುಂತರಿ ಲಗಾಫಾಲಿ, ಕುಂತರಿ ಲಗಾಸರ್ಪಾನಿ, ಸೆರಾ ಮತ್ತು ಧುರ್ಮಾ ಗ್ರಾಮಗಳಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
'ಕುಂತರಿ ಲಗಾಫಾಲಿ, ಕುಂತರಿ ಲಗಾಸರ್ಪಾನಿ, ಸೆರಾ ಮತ್ತು ಧುರ್ಮಾ ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ 33 ಮನೆಗಳು, ಹಲವಾರು ಅಂಗಡಿಗಳು ಮತ್ತು ದನದ ಕೊಟ್ಟಿಗೆಗಳು ನಾಶವಾಗಿವೆ. ಹದಿನಾಲ್ಕು ಜನರು ಕಾಣೆಯಾಗಿದ್ದಾರೆ/ ಸುಮಾರು 20 ಜನರು ಗಾಯಗೊಂಡಿದ್ದಾರೆ’ಎಂದು ಅವರು ಹೇಳಿದ್ದಾರೆ.
ಮಳೆ ಸಂಬಂಧಿತ ಅವಘಡಗಳಲ್ಲಿ 200ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ತಲುಪಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಧಾಮಿ ತಿಳಿಸಿದ್ದಾರೆ.
ತಲೆಗೆ ಪೆಟ್ಟು ಬಿದ್ದಿರುವ ಮಗು ಸೇರಿದಂತೆ ಗಂಭೀರವಾಗಿ ಗಾಯಗೊಂಡವರನ್ನು ಹೃಷಿಕೇಶದ ಏಮ್ಸ್‌ಗೆ ವಿಮಾನದ ಮೂಲಕ ಸಾಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಡೆಹ್ರಾಡೂನ್‌ನ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಮೋಲಿ ಜಿಲ್ಲಾಧಿಕಾರಿ ಸಂದೀಪ್ ತಿವಾರಿ ಅವರೊಂದಿಗೆ ಮಾತನಾಡುವ ಮೂಲಕ ನಂದನಗರದ ಪರಿಸ್ಥಿತಿಯನ್ನು ಸಿಎಂ ಅವಲೋಕಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಕೂಡಲೇ ರಸ್ತೆಗಳ ದುರಸ್ಥಿ, ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಸಂಪರ್ಕ ಒದಗಿಸಲು ಬೇಕಾದ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.