ಉತ್ತರಕಾಶಿಯಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕಾಗಿ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಬಳಸಿ ಡೆಹ್ರಾಡೂನ್‌ನಿಂದ ಗುರುವಾರ ಜನರೇಟರ್‌ಅನ್ನು ಕೊಂಡೊಯ್ಯಲಾಯಿತು
ಪಿಟಿಐ ಚಿತ್ರ
ಡೆಹ್ರಾಡೂನ್: ಮೇಘ ಸ್ಫೋಟ ಕಾರಣದಿಂದ ಉಂಟಾದ ದಿಢೀರ್ ಪ್ರವಾಹದಿಂದ ನಲುಗಿರುವ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗುರುವಾರವೂ ರಕ್ಷಣಾ ಕಾರ್ಯ ಮುಂದುವರಿಯಿತು.
‘ಚಿನೂಕ್ ಹಾಗೂ ಎಂಐ–17 ಹೆಲಿಕಾಪ್ಟರ್‌ಗಳನ್ನು ಬಳಸಿ, 274 ಮಂದಿಯನ್ನು ರಕ್ಷಿಸಲಾಗಿದೆ. 9 ಮಂದಿ ಯೋಧರು, 60 ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ’ ಎಂದು ಸೇನೆ ತಿಳಿಸಿದೆ.
‘ಹರ್ಶಿಲ್, ಗಂಗೋತ್ರಿ ಹಾಘೂ ಝಾಲಾದಿಂದ 275 ಜನರನ್ನು ಮತಲಿ ಹೆಲಿಪ್ಯಾಡ್‌ಗೆ ಕಳುಹಿಸಲಾಗಿದೆ. ಅವರನ್ನು ಅಲ್ಲಿಂದ ಅವರ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಪ್ರಶಾಂತ ಆರ್ಯ ತಿಳಿಸಿದ್ದಾರೆ.
ಮತಲಿ ಹೆಲಿಪ್ಯಾಡ್‌ಗೆ ಕರೆದುಕೊಂಡು ಬಂದವರಲ್ಲಿ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಕಾಶಿಯಲ್ಲಿಯೇ ವಾಸ್ತವ್ಯ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಧರಾಲಿ ಗ್ರಾಮದಲ್ಲಿ ಅವಶೇಷಗಳಡಿ ಸಿಲುಕಿರುವವರ ಶೋಧ ಹಾಗೂ ರಕ್ಷಣೆಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಇವುಗಳನ್ನು ಘಟನಾಸ್ಥಳಕ್ಕೆ ಏರ್‌ಲಿಫ್ಟ್ ಮಾಡುವ ಪ್ರಯತ್ನಗಳು ಕೂಡ ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹರ್ಶಿಲ್ ಹಾಗೂ ನೆಲಾಂಗ್‌ನಲ್ಲಿರುವ ಮಿಲಿಟರಿ ಹೆಲಿಪ್ಯಾಡ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಗಂಗೋತ್ರಿಯಿಂದ ಈ ಹೆಲಿಪ್ಯಾಡ್‌ಗಳಿಗೆ ಸಂಪರ್ಕಿಸುವ ರಸ್ತೆಗಳು ಸುಸ್ಥಿತಿಯಲ್ಲಿರುವ ಕಾರಣ, ಪ್ರವಾಸಿಗಳ ಪ್ರಯಾಣಕ್ಕೆ ಅನುಕೂಲವಾಗಿದೆ.
ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಬಳಿ ಗುರುವಾರವೂ ರಕ್ಷಣಾ ಕಾರ್ಯ ನಡೆಯಿತು
50–60 ಅಡಿಗಳಷ್ಟು ಎತ್ತರ ಅವಶೇಷಗಳ ರಾಶಿ ಬಿದ್ದಿವೆ. ಇವುಗಳ ಅಡಿ ಕೆಲವರು ಸಿಲುಕಿರುವ ಸಾಧ್ಯತೆ ಇದ್ದು ಅತ್ಯಾಧುನಿಕ ಯಂತ್ರೋಪಕರಣ ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ– ಅರುಣ್ ಮೋಹನ್ ಜೋಶಿ, ಐಜಿ ಎಸ್‌ಡಿಆರ್‌ಎಫ್
ಧರಾಲಿ ಅವಘಡದಲ್ಲಿ ಸಂತ್ರಸ್ತರಾಗಿರುವ ನನ್ನ ಸಹೋದರಿಯರನ್ನು ಭೇಟಿ ಮಾಡಿದೆ. ಅವರ ನೋವು ಅರ್ಥ ಮಾಡಿಕೊಳ್ಳಬಲ್ಲೆ. ಇಂತಹ ಸಂಕಷ್ಟ ಸಮಯದಲ್ಲಿ ಅಸಾಧಾರಣ ಧೈರ್ಯ ತೋರುತ್ತಿರುವ ಅವರಿಗೆ ವಂದಿಸುವೆ– ಪುಷ್ಕರ್ ಸಿಂಗ್ ಧಾಮಿ, ಮುಖ್ಯಮಂತ್ರಿ
ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಬಳಿ ಗುರುವಾರವೂ ರಕ್ಷಣಾ ಕಾರ್ಯ ನಡೆಯಿತು
ರಕ್ಷಣೆಗೆ ನಿಯೋಜನೆ
ಯೋಧರು ಎಂಜಿನಿಯರ್‌ಗಳು ವೈದ್ಯರು ಹಾಗೂ ರಕ್ಷಣಾತಜ್ಞರು ಸೇರಿ 225ಕ್ಕೂ ಅಧಿಕ ಮಂದಿಯನ್ನು ನಿಯೋಜಿಸಲಾಗಿದೆ ಎಂದು ಸೇನೆ ತಿಳಿಸಿದೆ
ಟೇಕಲಾ ಗ್ರಾಮದಲ್ಲಿ ಒಂದು ರೀಕೊ ರೇಡಾರ್ ತಂಡವನ್ನು ನಿಯೋಜನೆ ಮಾಡಿರುವ ಸೇನೆ ಮತ್ತೊಂದು ರೇಡಾರ್ ತಂಡದ ನಿಯೋಜನೆಗೆ ಮುಂದಾಗಿದೆ
ಡೆಹ್ರಾಡೂನ್‌ನ ಜಾಲಿಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಚಿನೂಕ್ ಹಾಗೂ ಎಂ–17 ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ
ನಾಗರಿಕಯಾನಕ್ಕೆ ಬಳಸುವ ಐದು ‘ಸಹಸ್ತ್ರಧಾರಾ’ ಹೆಲಿಕಾಪ್ಟರ್‌ಗಳನ್ನು ನಿಯೋಜನೆ ಮಾಡಲಾಗಿದ್ದು ಮತಲಿ ಭಟ್ವಾರಿ ಮತ್ತು ಹರ್ಶಿಲ್‌ಗಳಲ್ಲಿ ನಡೆಯುವ ರಕ್ಷಣಾ ಕಾರ್ಯಕ್ಕೆ ಬಳಸಲಾಗುತ್ತಿದೆ
ಇಂಡೊ–ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಧರಾಲಿ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ರಕ್ಷಿಸಿ ಮತಲಿಯಲ್ಲಿರುವ ಐಟಿಬಿಪಿಯ ಹೆಲಿಪ್ಯಾಡ್‌ಗೆ ಗುರುವಾರ ಕರೆದುಕೊಂಡು ಬರಲಾಯಿತು
ಪ್ರಮುಖ ಅಂಶಗಳು
ವಿವಿಧ ಸರ್ಕಾರಿ ಸಂಸ್ಥೆಗಳ ಸಮನ್ವಯದೊಂದಿಗೆ ಸೇನೆಯು ಧರಾಲಿ ಮತ್ತು ಹರ್ಶಿಲ್ ಗ್ರಾಮದಲ್ಲಿ ‘ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ’(ಎಚ್‌ಎಡಿಆರ್) ಕಾರ್ಯಾಚರಣೆ ನಡೆಸುತ್ತಿದೆ
ಭೂಕುಸಿತ ಹಾಗೂ ರಸ್ತೆಗಳು ಹಾಳಾಗಿರುವ ಕಾರಣ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ರಕ್ಷಣಾ ಕಾರ್ಯ ಕೈಗೊಳ್ಳುವುದು ಈಗಲೂ ಸವಾಲಾಗಿಯೇ ಇದೆ
9 ಮಂದಿ ಯೋಧರು ಹಾಗೂ ಮೂವರು ನಾಗರಿಕರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಡೆಹ್ರಾಡೂನ್‌ಗೆ ಕರೆದೊಯ್ಯಲಾಗಿದೆ
ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಹೃಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ(ಎಐಐಎಂಎಸ್) 8 ಗಾಯಾಳುಗಳನ್ನು ಉತ್ತರಕಾಶಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಮಣ್ಣು ತುಂಬಿರುವ ಕಾರಣ ಧರಾಲಿಯಲ್ಲಿರುವ ಹೆಲಿಪ್ಯಾಡ್‌ನ ಬಳಕೆ ಸಾಧ್ಯವಾಗುತ್ತಿಲ್ಲ
ಇಂಡೊ–ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಧರಾಲಿ ಗ್ರಾಮದಲ್ಲಿ ವೃದ್ಧೆಯೊಬ್ಬರನ್ನು ರಕ್ಷಿಸಿ ಮತಲಿಯಲ್ಲಿರುವ ಐಟಿಬಿಪಿಯ ಹೆಲಿಪ್ಯಾಡ್‌ಗೆ ಗುರುವಾರ ಕರೆದುಕೊಂಡು ಬರಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.