ADVERTISEMENT

Vadodara Accident | ಅಪಘಾತಕ್ಕೂ ಮುನ್ನ ಡ್ರಗ್ಸ್ ಸೇವಿಸಿದ್ದ ಆರೋಪಿ: ಪೊಲೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2025, 10:54 IST
Last Updated 17 ಮಾರ್ಚ್ 2025, 10:54 IST
<div class="paragraphs"><p>ರಕ್ಷಿತ್‌ ಚೌರಾಸಿಯಾ</p></div>

ರಕ್ಷಿತ್‌ ಚೌರಾಸಿಯಾ

   

ವಡೋದರ (ಗುಜರಾತ್): ನಗರದಲ್ಲಿ ಕಳೆದ ವಾರ (ಮಾರ್ಚ್‌ 13ರಂದು) ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದರು. ಈ ಅಪಘಾತಕ್ಕೆ ಕಾರಣವಾದ ಕಾರು ಚಾಲಕ, ಕಾನೂನು ವಿದ್ಯಾರ್ಥಿ ರಕ್ಷಿತ್‌ ಚೌರಾಸಿಯಾ ಎಂಬಾತ ಮಾದಕ ವಸ್ತು ಸೇವಿಸಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.

'ಬಂಧನದ ಸಂದರ್ಭದಲ್ಲಿ ಮಾದಕವಸ್ತು ರ‍್ಯಾಪಿಡ್ ಟೆಸ್ಟ್ ಕಿಟ್ ಮೂಲಕ ನಡೆಸಿದ ಪರೀಕ್ಷೆಯಲ್ಲಿ, ಆರೋಪಿಯು ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ. ಆದರೆ, ಈ ರೀತಿ ಪರೀಕ್ಷಾ ಕಿಟ್‌ನಿಂದ ದೊರೆತ ಫಲಿತಾಂಶವು ನ್ಯಾಯಾಲಯಕ್ಕೆ ಸಲ್ಲಿಸಲು ಸೂಕ್ತ ಸಾಕ್ಷ್ಯವಾಗದು' ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ADVERTISEMENT

'ಚೌರಾಸಿಯಾ ಮತ್ತು ಆತನೊಂದಿಗೆ ಕಾರಿನಲ್ಲಿದ್ದ ಇನ್ನಿಬ್ಬರ ರಕ್ತದ ಮಾದರಿಯನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ' ಎಂದೂ ಹೇಳಿದ್ದಾರೆ.

ರ‍್ಯಾಪಿಡ್ ಟೆಸ್ಟ್ ಕಿಟ್ ಮೂಲಕ ನಡೆಸುವ ಪರೀಕ್ಷೆಯಲ್ಲಿ ಆರೋಪಿಯು ಮಾದಕವಸ್ತು ಸೇವಿಸಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಿದೆಯಾದರೂ, ನಿರ್ದಿಷ್ಠವಾಗಿ ಯಾವ ವಸ್ತುವನ್ನು ಸೇವಿಸಿದ್ದಾನೆ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಿಂದಷ್ಟೇ ಸಾಧ್ಯ. ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಸುವಾಗ ರಕ್ತದ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಆದಾಗ್ಯೂ, ಕೂದಲು ಮತ್ತು ಉಗುರುಗಳ ಪರೀಕ್ಷೆಯನ್ನೂ ನಡೆಸುವುದರಿಂದ ಆರೋಪಿಯು ಅಪಘಾತ ನಡೆದಾಗ ಮಾದಕವಸ್ತು ಸೇವಿಸಿದ್ದನೇ ಎಂಬುದನ್ನು 100 ದಿನಗಳ ವರೆಗೆ ಪತ್ತೆಹಚ್ಚಲು ಸಾಧ್ಯವಿದೆ.

'ಎಫ್‌ಎಸ್‌ಎಲ್‌ ವರದಿ ಒಂದು ವಾರದೊಳಗೆ ಲಭ್ಯವಾಗಲಿದೆ. ಅದರಲ್ಲಿ, ಚೌರಾಸಿಯಾ ಮಾದಕವಸ್ತು ಸೇವಿಸಿ ವಾಹನ ಚಾಲನೆ ಮಾಡಿರುವುದು ದೃಢವಾದರೆ ಸಂಬಂಧಿಸಿದ ಸೆಕ್ಸನ್‌ಗಳ ಅಡಿ ಪ್ರಕರಣ ದಾಖಲಿಸಲಾಗುವುದು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.