ADVERTISEMENT

ವಡೋದರಾ ಸೇತುವೆ ಕುಸಿತ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ; ತನಿಖೆ ಆರಂಭ

ಪಿಟಿಐ
Published 10 ಜುಲೈ 2025, 11:26 IST
Last Updated 10 ಜುಲೈ 2025, 11:26 IST
<div class="paragraphs"><p>ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿಯ ‘ಗಂಭೀರ’ ಸೇತುವೆ ಕುಸಿತದಲ್ಲಿ ಮಹಿಸಾಗರ ನದಿಗೆ ಬಿದ್ದದ್ದ ವಾಹನಗಳನ್ನು ಸ್ಥಳೀಯರು ಹೊರಕ್ಕೆ ಎಳೆಯುವ ಪ್ರಯತ್ನ ನಡೆಸಿದರು</p></div>

ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿಯ ‘ಗಂಭೀರ’ ಸೇತುವೆ ಕುಸಿತದಲ್ಲಿ ಮಹಿಸಾಗರ ನದಿಗೆ ಬಿದ್ದದ್ದ ವಾಹನಗಳನ್ನು ಸ್ಥಳೀಯರು ಹೊರಕ್ಕೆ ಎಳೆಯುವ ಪ್ರಯತ್ನ ನಡೆಸಿದರು

   

ಪಿಟಿಐ ಚಿತ್ರ

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 

ADVERTISEMENT

ಮಹಿಸಾಗರ ನದಿಗೆ ಕಟ್ಟಲಾದ ‘ಗಂಭೀರ ಸೇತುವೆ’ ಕುಸಿದು ಸಂಚರಿಸುತ್ತಿದ್ದ ಹಲವು ವಾಹನಗಳು ನದಿಗೆ ಬಿದ್ದಿದ್ದವು. ಬುಧವಾರ ರಾತ್ರಿ ಹೊತ್ತಿಗೆ ಸಾವಿನ ಸಂಖ್ಯೆ 10ಕ್ಕೆ ತಲುಪಿತ್ತು. ಶೋಧ ಕಾರ್ಯದಲ್ಲಿ ಮೃತದೇಹಗಳು ಪತ್ತೆಯಾಗಿದ್ದರಿಂದ, ಸಾವಿನ ಸಂಖ್ಯೆ 15ಕ್ಕೆ ಏರಿದೆ.

ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ಸೇತುವೆಯ 10ರಿಂದ 15 ಮೀಟರ್ ಉದ್ದದ ಸ್ಲಾಬ್ ಕುಸಿದ ಪರಿಣಾಮ, ಆ ಸಂದರ್ಭದಲ್ಲಿ ಸಾಗುತ್ತಿದ್ದ ವಾಹನಗಳು ನದಿಗೆ ಬಿದ್ದಿದ್ದವು. ಇದರಲ್ಲಿ ಎರಡು ಟ್ರಕ್, ಎರಡು ವ್ಯಾನ್, ಒಂದು ರಿಕ್ಷಾ, ಒಂದು ದ್ವಿಚಕ್ರ ವಾಹನ ನದಿಗೆ ಬಿದ್ದಿದ್ದವು. ಘಟನೆಯಲ್ಲಿ ಗಾಯಗೊಂಡ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ತಿಳಿಸಿದ್ದಾರೆ.

ಘಟನೆ ನಡೆದ ಸಮಯದಿಂದ ಅಗ್ನಿಶಾಮಕ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಬೆಳಗ್ಗೆಯವರೆಗೂ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸಿದರು ಎಂದು ಜಿಲ್ಲಾಧಿಕಾರಿ ಅನಿಲ್ ಧಮೇಲಿಯಾ ತಿಳಿಸಿದ್ದಾರೆ.

ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಆದೇಶಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಮೂರು ಮೀಟರ್ ಆಳದ ಹೂಳಿನಲ್ಲಿ ಸಿಲುಕಿರುವ ವಾಹನಗಳು

ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮಹಿಸಾಗರ ನದಿಯಲ್ಲಿ ಸುಮಾರು ನಾಲ್ಕು ಕಿಲೋ ಮೀಟರ್‌ ದೂರದವರೆಗೂ ಶೋಧ ಕಾರ್ಯ ನಡೆಸಿವೆ. ಈವರೆಗೂ 15 ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಕುರಿತು ಮಾಹಿತಿ ಇದ್ದಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪತ್ತೆಯಾದ ಮೂರು ಮೃತದೇಹಗಳು ಅಪಘಾತದಲ್ಲಿ ಮೃತಪಟ್ಟವರೇ ಅಥವಾ ಬೇರೆ ಇನ್ಯಾವುದೇ ಪ್ರಕರಣದಲ್ಲಿ ಮೃತಪಟ್ಟವೇ ಎಂಬುದು ಗೊತ್ತಿಲ್ಲ. ಏಕೆಂದರೆ ಸೇತುವೆ ಕುಸಿತ ಪ್ರಕರಣದಲ್ಲಿ ನದಿಗೆ ಬಿದ್ದ ವಾಹನಗಳಲ್ಲಿ ಎಷ್ಟು ಜನರಿದ್ದರು, ಅವರು ಯಾರು ಎಂಬುದರ ಮಾಹಿತಿ ಇಲ್ಲ. ನದಿಗೆ ಬಿದ್ದ ವಾಹನಗಳ ಸುಮಾರು ಮೂರು ಮೀಟರ್‌ ಆಳದ ಹೂಳಿನಲ್ಲಿ ಸಿಲುಕಿಕೊಂಡಿವೆ’ ಎಂದು ತಿಳಿಸಿದ್ದಾರೆ.

‘ಮಳೆ ಮತ್ತು ನದಿಪಾತ್ರದಲ್ಲಿ ಹೂಳು ತುಂಬಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ನದಿ ಬಳಿ ಯಾವುದೇ ಯಂತ್ರಗಳು ತೆರಳಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿಯೇ ವಿಶೇಷ ಸೇತುವೆ ನಿರ್ಮಿಸಿ, ನದಿ ಬಳಿ ಹೋಗುವ ಪ್ರಯತ್ನ ನಡೆಸಲಾಗುತ್ತಿದೆ. ಇದರಿಂದ ಸೇತುವೆ ಮಧ್ಯಭಾಗದಲ್ಲಿ ಬಿದ್ದಿರುವ ವಾಹನಗಳನ್ನು ತಲುಪಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಮುಖ್ಯಮಂತ್ರಿ ಸೂಚನೆಯಂತೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಲು ರಸ್ತೆ ಹಾಗೂ ಕಟ್ಟಡ ನಿರ್ಮಾಣ ಇಲಾಖೆಯ ಅಧಿಕಾರಿಗಳು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.