ADVERTISEMENT

ಎಸ್‌ಐಆರ್‌ ಕುರಿತು ವೈಕೊ ಅರ್ಜಿ: ಆಯೋಗದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 15:41 IST
Last Updated 25 ನವೆಂಬರ್ 2025, 15:41 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ/ಚೆನ್ನೈ: ತಮಿಳುನಾಡಿನಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ಎಂಡಿಎಂಕೆ ಸ್ಥಾಪಕ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ವೈಕೊ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೋರಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಅರ್ಜಿಯ ವಿಚಾರಣೆಯನ್ನು ಡಿ.2ಕ್ಕೆ ನಿಗದಿಪಡಿಸಿತು.

ಎಸ್‌ಐಆರ್‌ಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯು ಸಮಾನತೆಯ ಹಕ್ಕು, ಪ್ರಜಾ ಪ್ರತಿನಿಧಿ ಕಾಯ್ದೆಯ ವಿವಿಧ ನಿಬಂಧನೆಗಳು ಹಾಗೂ 1960ರ ಮತದಾರರ ನೋಂದಣಿ ನಿಯಮಗಳು ಸೇರಿದಂತೆ ವಿವಿಧ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವೈಕೊ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. 

ADVERTISEMENT

ಶೇ 50ರಷ್ಟು ಮತದಾರರು ಅರ್ಜಿ ಹಿಂತಿರುಗಿಸಿಲ್ಲ: ಎಸ್‌ಐಆರ್‌ ಪ್ರಕ್ರಿಯೆ ತರಾತುರಿಯಲ್ಲಿ ಕೈಗೊಂಡಿರುವುದರಿಂದ ಬೂತ್‌ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಮಾನಸಿಕ ಒತ್ತಡ ಉಂಟಾಗಿದೆ. ಶೇಕಡ 50ರಷ್ಟು ಮತದಾರರು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಇನ್ನೂ ವಾಪಸ್‌ ನೀಡಿಲ್ಲ ಎಂದು ತಮಿಳುನಾಡಿನ ಸಚಿವ ಎಸ್. ರಘುಪತಿ ಮಂಗಳವಾರ ಹೇಳಿದ್ದಾರೆ.

ಡಿ.4ರ ಗಡುವು ಸಮೀಪಿಸುತ್ತಿರುವುದರಿಂದ, ಎಸ್ಐಆರ್‌ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಬಿಎಲ್‌ಒಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮತದಾರರಿಗೆ ಇನ್ನೂ ಅರ್ಜಿ ನಮೂನೆಗಳನ್ನು ವಿತರಿಸಿಲ್ಲ ಎಂದಿದ್ದಾರೆ.

‘ಬೇರೆ ರಾಜ್ಯಗಳಲ್ಲಿ ಕೆಲಸದ ಒತ್ತಡದಿಂದ ಐವರು ಬಿಎಲ್‌ಒಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ಯಾರು ಹೊಣೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.