ADVERTISEMENT

ವಾಜಪೇಯಿ ಭಾರತ ರಾಜಕಾರಣದ ‘ಎರಡನೇ ನೆಹರೂ’: ಶಿವಸೇನೆ ನಾಯಕ ಸಂಜಯ್ ರಾವುತ್

ಪಿಟಿಐ
Published 25 ಡಿಸೆಂಬರ್ 2024, 7:00 IST
Last Updated 25 ಡಿಸೆಂಬರ್ 2024, 7:00 IST
   

ಮುಂಬೈ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತೀಯ ರಾಜಕಾರಣದ ‘ಎರಡನೇ ನೆಹರೂ’ ಎಂದು ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್ ಬಣ್ಣಿಸಿದರು.

ವಾಜಪೇಯಿ ಅವರ ಜನ್ಮ ಶತಾಮಾನೋತ್ಸವದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ‘ರಾಜಧರ್ಮಕ್ಕೆ ಧಕ್ಕೆ ಬಂದಾಗಲೆಲ್ಲಾ ದೇಶವು ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತದೆ’ ಎಂದು ಹೇಳಿದರು.

‘ಇಂದಿನ ಬಿಜೆಪಿಯು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪರಂಪರೆಯನ್ನು ಕೆಡಿಸುತ್ತಿದೆ. ಆದರೆ, ವಾಜಪೇಯಿ ಅವರು ದೇಶದ ರಾಜಕೀಯದ ‘ಎರಡನೇ ನೆಹರೂ’ ಆಗಿದ್ದರು. ಅವರು ಕಾಂಗ್ರೆಸ್ಸೇತರ ಪಕ್ಷಗಳ ನೆಹರೂ’ ಎಂದು ಹೇಳಿದರು.

ADVERTISEMENT

‘ವಾಜಪೇಯಿ ಅವರು ಕಠಿಣ ಹಿಂದುತ್ವವಾದಿಯಾಗಿದ್ದರೂ ದೇಶ ಎಲ್ಲರಿಗೂ ಸೇರಿದ್ದು ಎಂದು ನಂಬಿದ್ದರು. ಅವರ ನೇತೃತ್ವದಲ್ಲಿ ಬಿಜೆಪಿ ಎಲ್ಲರನ್ನೂ ಒಳಗೊಂಡಿತ್ತು. ಪಂಡಿತ್ ನೆಹರೂ ಕೂಡ ವಾಜಪೇಯಿ ಅವರನ್ನು ಮೆಚ್ಚಿ ಆಶೀರ್ವದಿಸಿದ್ದರು’ ಎಂದು ರಾವುತ್ ತಿಳಿಸಿದರು.

‘ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರು ವಾಜಪೇಯಿ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು ಮತ್ತು ಅವರ ಮಾತಿಗೆ ಬೆಲೆ ಕೊಡುತ್ತಿದ್ದರು’ ಎಂದು ನೆನಪಿಸಿಕೊಂಡರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಸ್ವತಂತ್ರವಾಗಿ ಸ್ಪರ್ಧಿಸುತ್ತದೆಯೇ ಎಂಬ ಪ್ರಶ್ನೆಗೆ, ‘ಮೊದಲು ಚುನಾವಣಾ ವೇಳಾಪಟ್ಟಿ ಪ್ರಕಟವಾಗಲಿ... ನಂತರ ನಿಮಗೆ ತಿಳಿಯುತ್ತದೆ. ಚುನಾವಣೆಗೆ ಸಿದ್ಧತೆ ಪ್ರಾರಂಭಿಸಿದ್ದೇವೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.