
ಅಖಿಲೇಶ್ ಯಾದವ್
ಪಿಟಿಐ ಚಿತ್ರ
ನವದೆಹಲಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದವರು ಇದೀಗ ವಂದೇ ಮಾತರಂ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ವ್ಯಕ್ತಿಗಳು ವಂದೇ ಮಾತರಂನ ಅರ್ಥವನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ. ವಂದೇ ಮಾತರಂನ ಗೀತೆ ಕೇವಲ ಪ್ರದರ್ಶನಕ್ಕಲ್ಲ, ರಾಜಕೀಯ ಸಾಧನವೂ ಅಲ್ಲ ಎಂದು ಬಿಜೆಪಿ ವಿರುದ್ಧ ಯಾದವ್ ಹರಿಹಾಯ್ದರು.
ವಂದೇ ಮಾತರಂಗೆ 150 ವರ್ಷವಾದ ಪ್ರಯುಕ್ತ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ರಾಷ್ಟ್ರಗೀತೆ ವಂದೇ ಮಾತರಂಗೆ 50 ವರ್ಷ ತುಂಬಿದಾಗ ದೇಶವು ವಸಾಹತುಶಾಹಿಯ ಅಡಿಯಲ್ಲಿ ತತ್ತರಿಸುತಿತ್ತು. 100 ವರ್ಷವಾದಾಗ ತುರ್ತು ಪರಿಸ್ಥಿತಿಯಲ್ಲಿತ್ತು. ಆಗ, ದೇಶಭಕ್ತಿ ಹೊಂದಿದ್ದ, ರಾಷ್ಟ್ರಕ್ಕಾಗಿ ಪ್ರಾಣ ಸಮರ್ಪಿಸಲು ಸಿದ್ದರಿದ್ದವರು ಜೈಲಿನಲ್ಲಿ ಬಂಧಿಯಾಗಿದ್ದರು. ಅದು ನಮ್ಮ ಇತಿಹಾಸದ ಕರಾಳ ಅಧ್ಯಾಯ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ವ್ಯಂಗ್ಯವಾಡಿವೆ.
‘ಬ್ರಿಟಿಷರಂತೆ ಬಿಜೆಪಿಯವರು ದೇಶ ವಿಭಜನೆಗಾಗಿ ವಂದೇ ಮಾತರಂ ಅನ್ನು ಬಳಸುತ್ತಿದ್ದಾರೆ ಎಂದಿರುವ ಯಾದವ್, ಬ್ರಿಟಿಷರು ಬಳಸಿದ ಅದೇ 'ವಿಭಜನೆ ಮತ್ತು ಆಳ್ವಿಕೆ' ನೀತಿಯನ್ನು ಇನ್ನೂ ಅನುಸರಿಸುತ್ತಿದ್ದಾರೆ‘ ಎಂದು ಆರೋಪಿಸಿದ್ದಾರೆ.
ಇಂದು ಆಡಳಿತದಲ್ಲಿರುವವರು ತಮ್ಮದಲ್ಲದ ಹೆಸರು, ಪ್ರತಿಷ್ಠೆಗಳನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ನಿಜವಾಗಿಯೂ ಇತಿಹಾಸ ಬೇರೆನೇ ಇದೆ. ಖಜಾನೆ ಖಾಲಿ ಮಾಡುವುದು ಹೇಗೆ ಎಂದು ಬಿಜೆಪಿ ಸದಾ ಯೋಚಿಸುತ್ತದೆ ಎಂದು ಹೇಳಿದ್ದಾರೆ.
'ವಂದೇ ಮಾತರಂ' ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಹೊರಬರಲು, ಎಲ್ಲರನ್ನೂ ಒಗ್ಗೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಯಾದವ್ ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.