ADVERTISEMENT

‘ವಂದೇ ಮಾತರಂ’ ವಿವಾದ: ಟ್ಯಾಗೋರ್‌ ಅವಮಾನಿಸಿದ ಮೋದಿ- ಕಾಂಗ್ರೆಸ್‌

ಪ್ರಧಾನಿ ಕ್ಷಮೆಯಾಚನೆಗೆ ಒತ್ತಾಯ

ಪಿಟಿಐ
Published 9 ನವೆಂಬರ್ 2025, 14:10 IST
Last Updated 9 ನವೆಂಬರ್ 2025, 14:10 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ‘ವಂದೇ ಮಾತರಂ’ ಗೀತೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ‘ಪ್ರಧಾನಿ ಅವರು 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ರವೀಂದ್ರನಾಥ ಟ್ಯಾಗೋರ್‌ ಅವರನ್ನು ಅವಮಾನಿಸಿದ್ದಾರೆ’ ಎಂದು ಹೇಳಿದೆ. 

‘ಈ ವಿಚಾರವಾಗಿ ಪ್ರಧಾನಿ ಅವರು ಕ್ಷಮೆಯಾಚಿಸಬೇಕು. ಪ್ರಸಕ್ತ ವಿದ್ಯಮಾನಗಳ ಆಧಾರದಲ್ಲಿ ಅವರು ಚುನಾವಣೆಗಳಲ್ಲಿ ಹೋರಾಡಲಿ’ ಎಂದು ಆಗ್ರಹಿಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು, ‘ಸಿಡಬ್ಲ್ಯುಸಿ ಮತ್ತು ಟ್ಯಾಗೋರ್‌ ಅವರನ್ನು ಅವಮಾನಿಸಿರುವುದು ಆಘಾತಕಾರಿಯಾದರೂ ಅಚ್ಚರಿಯೇನಲ್ಲ. ಏಕೆಂದರೆ ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯಲ್ಲಿ ಆರ್‌ಎಸ್ಎಸ್‌ ಯಾವುದೇ ಪಾತ್ರವನ್ನು ವಹಿಸಿಲ್ಲ’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ADVERTISEMENT

ಸಿಡಬ್ಲ್ಯುಸಿ ಹೇಳಿಕೆಯನ್ನು ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 1937ರ ಅಕ್ಟೋಬರ್‌ 26ರಿಂದ ನವೆಂಬರ್‌ 1ರವರೆಗೆ ಕೋಲ್ಕತ್ತದಲ್ಲಿ ಸಭೆ ಸೇರಿತ್ತು. ಈ ಸಭೆಯಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್‌, ರಾಜೇಂದ್ರ ಪ್ರಸಾದ್‌, ಮೌಲಾನಾ ಅಬುಲ್‌ ಕಲಾಂ ಆಜಾದ್‌, ಸರೋಜಿನಿ ನಾಯ್ಡು, ಜೆ.ಬಿ.ಕೃಪಲಾನಿ ಮತ್ತಿತರರು ಭಾಗಿಯಾಗಿದ್ದರು. ಸಿಡಬ್ಲ್ಯುಸಿಯು ರವೀಂದ್ರನಾಥ ಟ್ಯಾಗೋರ್‌ ಅವರ ಸಲಹೆಯಂತೆ ‘ವಂದೇ ಮಾತರಂ’ ಕುರಿತ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು’ ಎಂದು ಅವರು ತಿಳಿಸಿದ್ದಾರೆ.

‘ವಂದೇ ಮಾತರಂ’ ಗೀತೆಯು 150 ವರ್ಷ ಪೂರೈಸಿರುವ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ವಂದೇ ಮಾತರಂ’ ಗೀತೆಯ ಕೆಲ ಪ್ರಮುಖ ಸಾಲುಗಳನ್ನು 1937ರಲ್ಲಿ ಕೈಬಿಡಲಾಗಿದೆ. ಇದು ದೇಶ ವಿಭಜನೆಯ ಬೀಜ ಬಿತ್ತಲು ಕಾರಣವಾಯಿತು. ಅಂತಹ ‘ವಿಭಜಕ ಮನಃಸ್ಥಿತಿ’ ಇನ್ನೂ ದೇಶಕ್ಕೆ ಸವಾಲಾಗಿದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.