ADVERTISEMENT

ರಿಲಯನ್ಸ್‌ನ ವಂತಾರಾ ಪ್ರಕರಣ SC ಇತ್ಯರ್ಥ; ಕ್ಷಿಪ್ರಗತಿಯ ವಿಚಾರಣೆ ಎಂದ ಜೈರಾಮ್

ಪಿಟಿಐ
Published 16 ಸೆಪ್ಟೆಂಬರ್ 2025, 6:45 IST
Last Updated 16 ಸೆಪ್ಟೆಂಬರ್ 2025, 6:45 IST
   

ನವದೆಹಲಿ: ಅಂಬಾನಿ ಕುಟುಂಬ ಸ್ಥಾಪಿಸಿರುವ ವಂತಾರಾ ಪ್ರಾಣಿ ಸಂಗ್ರಹಾಲಯ ಕುರಿತು ಎಸ್‌ಐಟಿ ನೀಡಿದ ಕ್ಲೀನ್ ಚಿಟ್‌ ನಂತರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಇತ್ಯರ್ಥ ಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಜೈರಾಮ್ ರಮೇಶ್, ‘ಇದೇ ರೀತಿಯಲ್ಲಿ ಎಲ್ಲಾ ಪ್ರಕರಣಗಳನ್ನೂ ತ್ವರಿತವಾಗಿ ಇತ್ಯರ್ಥ ಪಡೆಸಿದರೆ...’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಭಾರತದ ನ್ಯಾಯಾಂಗ ವ್ಯವಸ್ಥೆಯು ವಿಳಂಬ ಎಂದೇ ಹೇಳಲಾಗುತ್ತಿರುವಾಗ, ಒಂದು ಪ್ರಕರಣವನ್ನು ಮಾತ್ರ ಅತ್ಯದ್ಭುತ ವೇಗದಲ್ಲಿ ಇತ್ಯರ್ಥಪಡಿಸಿದೆ’ ಎಂದು ಪರಿಸರ ಇಲಾಖೆ ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

‘ಜಾಮ್‌ನಗರದಲ್ಲಿ ರಿಯಲನ್ಸ್‌ ಪ್ರತಿಷ್ಠಾನ ಪ್ರಾರಂಭಿಸಿರುವ ವಂತಾರಾ ಎಂಬ ವನ್ಯಮೃಗಗಳ ಪುನರ್ವಸತಿ ಕೇಂದ್ರದ ಕುರಿತು 2025ರ ಆಗಸ್ಟ್ 25ರಂದು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚಿಸಿತ್ತು. ಸೆ. 12ರೊಳಗೆ ವರದಿ ಸಲ್ಲಿಸುವಂತೆ ಈ ಸಮಿತಿಗೆ ನ್ಯಾಯಾಲಯ ಸೂಚಿಸಿತ್ತು’ ಎಂದು ಜೈರಾಮ್ ವಿವರಿಸಿದ್ದಾರೆ.

ADVERTISEMENT

‘ಆ. 7ರಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ನೇಮಕಗೊಂಡ ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ಸೆ. 15ರಂದು ತನ್ನ ವರದಿ ಸಲ್ಲಿಸಿತು. ಅದನ್ನು ಸ್ವೀಕರಿಸುತ್ತಲೇ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದೆ. ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾ. ಪಂಕಜ್‌ ಮಿತ್ತಲ್ ಮತ್ತು ನ್ಯಾ. ಪಿ.ಬಿ. ರಾಳೆ ಅವರಿದ್ದ ಪೀಠ ಹೇಳಿದೆ’ ಎಂದಿದ್ದಾರೆ.

‘ಈ ನಿಗೂಢ 'ಮುಚ್ಚಿದ ಕವರ್' ವ್ಯವಹಾರವಿಲ್ಲದೆ, ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ಮತ್ತು ವಿಭಾಗವಾರು ಇತ್ಯರ್ಥಪಡಿಸಿದರೆ ಇನ್ನೇನು ಬೇಕು’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಏನಿದು ಪ್ರಕರಣ..?: ವಂತಾರಾದಲ್ಲಿ ಕಾನೂನು ಉಲ್ಲಂಘನೆಯಾಗಿದೆ ಹಾಗೂ ಅಕ್ರಮಗಳು ನಡೆಯುತ್ತಿವೆ ಎಂದು ಸಾಮಾಜಿಕ ಮಾಧ್ಯಮ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವನ್ಯಜೀವಿ ಸಂಘಟನೆಗಳ ವರದಿಯನ್ನು ಆಧರಿಸಿ ಸಲ್ಲಿಕೆಯಾದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. 

ವಿವಿಧ ಸಂಘಟನೆಗಳ ಸಹಯೋಗದಲ್ಲಿ ತನಿಖೆ ನಡೆಸಿದ ತಂಡವು, ‘ವಂತಾರಾದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, ಪ್ರಾಣಿ ಸಂಗ್ರಹಾಲಯದ ಕಾನೂನು ಮಾಗೂ ಮಾರ್ಗಸೂಚಿ, ವಿದೇಶಿ ವ್ಯವಹಾರ, ವಿದೇಶಿ ವಿನಿಮಯ ಕಾಯ್ದೆ, ಅಳಿವಿನಂಚಿನಲ್ಲಿರುವ ವನ್ಯಜೀವಿ ಹಾಗೂ ಇತರ ಜೀವಸಂಕುಲಗಳ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಯಾವುದೇ ಲೋಪಗಳಾಗಿಲ್ಲ’ ಎಂದು ವರದಿ ನೀಡಿತ್ತು.

ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರಾ ವಿರುದ್ಧದ ಪ್ರಾಣಿ ದಯಾ ಸಂಘಗಳು ವ್ಯಕ್ತಪಡಿಸಿದ ಅನುಮಾನ ಹಾಗೂ ಆರೋಪಗಳು ಆಧಾರ ರಹಿತ. ಈ ನಿಟ್ಟಿನನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ ಎಂದು ರಿಲಯನ್ಸ್ ಪ್ರತಿಷ್ಠಾನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.