ADVERTISEMENT

13ರಂದು ‘ವಾಯು’ ಚಂಡಮಾರುತ ಅಪ್ಪಳಿಸಲಿದೆ: ಹವಾಮಾನ ಇಲಾಖೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:24 IST
Last Updated 11 ಜೂನ್ 2019, 16:24 IST
ಚಂಡಮಾರುತ ಕೇಂದ್ರೀಕೃತವಾಗಿರುವ ದೃಶ್ಯ. ಚಿತ್ರ: ಹವಾಮಾನ ಇಲಾಖೆ ಟ್ವೀಟ್‌
ಚಂಡಮಾರುತ ಕೇಂದ್ರೀಕೃತವಾಗಿರುವ ದೃಶ್ಯ. ಚಿತ್ರ: ಹವಾಮಾನ ಇಲಾಖೆ ಟ್ವೀಟ್‌   

ನವದೆಹಲಿ:ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ವಾಯು’ ಚಂಡಮಾರುತವು ಗುರುವಾರ (ಜೂ. 13) ಗುಜರಾತ್‌ ತೀರವನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮುಂದಿನ 12 ಗಂಟೆಗಳಲ್ಲಿ ‘ವಾಯು’ ಚಂಡಮಾರುತವು ಇನ್ನಷ್ಟು ತೀವ್ರಗೊಂಡು ಗಂಟೆಗೆ 110 ರಿಂದ 120 ಕಿ.ಮೀ. ವೇಗದಲ್ಲಿ ಉತ್ತರ ಭಾಗದತ್ತ ಸಂಚರಿಸಲಿದೆ. ಗುರುವಾರ ಮುಂಜಾನೆ ಗುಜರಾತ್‌ ತೀರದಲ್ಲಿ ಗಂಟೆಗೆ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಂಡಮಾರುತದ ಪರಿಣಾಮ ಸೌರಾಷ್ಟ್ರ ಮತ್ತು ಕಛ್‌ ಪ್ರದೇಶದಲ್ಲಿ ಬಿರುಗಾಳಿಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚಿಸಿದೆ.

ADVERTISEMENT
ವಾಯು ಚಂಡಮಾರುತ ಕೇಂದ್ರೀಕೃತವಾಗಿರುವ ಹಾಗೂ ಮುಂದೆ ಸಾಗುವ ದಿಕ್ಕು

ಕಟ್ಟೆಚ್ಚರ:‘ವಾಯು’ ಚಂಡಮಾರುತವನ್ನು ಎದುರಿಸಲು ಸರ್ಕಾರ ಭಾರಿ ಸಿದ್ಧತೆ ಮಾಡಿಕೊಂಡಿದೆ. ಸೌರಾಷ್ಟ್ರ ಮತ್ತು ಕಛ್‌ ಕರಾವಳಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್‌) ನಿಯೋಜಿಸಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

‘ಗುಜರಾತ್‌ ಹಾಗೂ ದಮನ್‌ ಮತ್ತು ದಿಯುದಲ್ಲಿ ಎನ್‌ಡಿಆರ್‌ಎಫ್‌ನ 46 ತುಕಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ತುರ್ತು ಸಂದರ್ಭ ಎದುರಾದರೆ ಗುಜರಾತ್‌ಗೆ ಧಾವಿಸುವ ರೀತಿಯಲ್ಲಿ ಇನ್ನಷ್ಟು ತುಕಡಿಗಳನ್ನು ಸನ್ನದ್ಧವಾಗಿಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸನ್ನದ್ಧರಾಗಲು ಗೃಹ ಸಚಿವ ಅಮಿತ್‌ ಶಾ ಸೂಚನೆ

‘ವಾಯು’ ಚಂಡಮಾರುತದ ಮುನ್ಸೂಚನೆ ನೀಡಿದ ಬೆನ್ನಲ್ಲೇ ಉನ್ನತಮಟ್ಟದ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವರ ಅಮಿತ್‌ ಶಾ, ನಾಗರಿಕರು ಅಪಾಯಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಹಾಗೂ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಲು ಸೂಚಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸಚಿವರು ಹಾಗೂ ವಿಪತ್ತು ನಿರ್ವಹಣಾ ಸಂಸ್ಥೆಗಳ ಜತೆ ಸಭೆ ನಡೆಸಿದ ಶಾ, ಜನರನ್ನು ಸ್ಥಳಾಂತರಿಸುವ ಹಾಗೂ ಅಗತ್ಯವಿರುವ ಎಲ್ಲಾ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಹೇಳಿದ್ದಾರೆ. 24x7 ನಿಯಂತ್ರಣ ಕೇಂದ್ರ ಕಾರ್ಯನಿರ್ವಹಿಸಬೇಕು ಹಾಗೂ ಅಗತ್ಯವಿರುವ ಜನರಿಗೆ ಲಭ್ಯವಾಗುವಂತೆ ದೂರವಾಣಿ ಸಂಖ್ಯೆಗಳನ್ನು ನೀಡಲು ಸೂಚಿಸಲಾಗಿದೆ.

ಭಾರತೀಯ ಕರಾವಳಿ ಪಡೆ, ನೌಕಾಪಡೆ, ಸೇನೆ, ವಾಯುಪಡೆ ತಂಡಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಸೇವೆ ಒದಗಿಸಲು ಆದೇಶಿಸಲಾಗಿದೆ.

ವಾಯು ಚಂಡಮಾರುತ ಕೇಂದ್ರೀಕೃತವಾಗಿರುವ ಹಾಗೂ ಮುಂದೆ ಸಾಗುವ ದಿಕ್ಕು

ಮೂರು ಲಕ್ಷ ಜನರ ಸ್ಥಳಾಂತರ

ಚಂಡಮಾರುತ ಅಪ್ಪಳಿಸಲಿರುವ ಪ್ರದೇಶಗಳಲ್ಲಿ ನೆಲೆಸಿರುವ ಸುಮಾರು ಮೂರು ಲಕ್ಷ ಜನರನ್ನು ಸ್ಥಳಾಂತರಿಸಲು ಗುಜರಾತ್‌ ಹಾಗೂ ದಿಯು ಆಡಳಿತ ಮುಂದಾಗಿದೆ. ಬುಧವಾರದಿಂದಲೇ (ಜೂನ್‌ 12) ಸ್ಥಳಾಂತರ ಕಾರ್ಯ ಆರಂಭವಾಗಲಿದೆ. ಇಂಥವರ ತಾತ್ಕಾಲಿಕ ಪುನರ್ವಸತಿಗಾಗಿ 700 ಕೇಂದ್ರಗಳನ್ನು ತೆರೆಯಲಾಗಿದೆ.

‘ಚಂಡಮಾರುತದಿಂದ ಆಗಬಹುದಾದ ಹಾನಿಯನ್ನು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂಥ ಸಂದರ್ಭವನ್ನು ನಿಭಾಯಿಸುವ ನಿಟ್ಟಿನಲ್ಲಿ ಒಡಿಶಾ ಸರ್ಕಾರದ ನೆರವನ್ನೂ ಪಡೆಯಲಾಗುತ್ತಿದೆ’ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಹೇಳಿದ್ದಾರೆ. ಮಂಗಳವಾರ ಸಂಜೆ ಅವರು ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ‘ಫೋನಿ’ ಚಂಡಮಾರುತ ಈಚೆಗೆ ಒಡಿಶಾವನ್ನು ಅಪ್ಪಳಿಸಿತ್ತು. ಆ ಸಂದರ್ಭದಲ್ಲಿ ಅಲ್ಲಿ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.