ADVERTISEMENT

ಒಡಿಶಾ ಕರಾವಳಿಗೆ ಅಪ್ಪಳಿಸಿತು ಅತ್ಯುಗ್ರ ತಿತ್ಲಿ ಚಂಡಮಾರುತ

ಭಾರೀ ಮಳೆ ನಿರೀಕ್ಷಿತ, ಜನಜೀವನ ಸ್ಥಗಿತ, ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಪಿಟಿಐ
Published 11 ಅಕ್ಟೋಬರ್ 2018, 1:58 IST
Last Updated 11 ಅಕ್ಟೋಬರ್ 2018, 1:58 IST
   

ಭುವನೇಶ್ವರ: ಅತ್ಯುಗ್ರ ಎಂದು ಕರೆಸಿಕೊಂಡಿರುವ ‘ತಿತ್ಲಿ’ ಚಂಡಮಾರುತ ಒಡಿಶಾದ ಗೋಪಾಲಪುರ ಸಮೀಪ ಭೂಮಿಗೆ ಅಪ್ಪಳಿಸಿತು. ಒಡಿಶಾದ ದಕ್ಷಿಣ ಕರಾವಳಿ, ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಪಶ್ಚಿಮ ಬಂಗಾಳದ ಕೆಲಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ಘೋಷಿಸಿದ್ದು, ಸಂಭವನೀಯ ಅವಘಡಗಳನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಂಡಿವೆ.

ಕೇಂದ್ರ ಸರ್ಕಾರವುರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) 1000 ಸಿಬ್ಬಂದಿಯನ್ನು ಮೂರೂ ರಾಜ್ಯಗಳಿಗೆ ಕಳಿಸಿಕೊಟ್ಟಿದೆ. ಕೆಲ ಪ್ರದೇಶಗಳಿಗೆರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದಅಗತ್ಯ ಪ್ರಮಾಣದಆಹಾರ ಮತ್ತುಇಂಧನವನ್ನು ದಾಸ್ತಾನು ಮಾಡಿಕೊಳ್ಳಲು ಬುಧವಾರ ಸೂಚಿಸಿತ್ತು.

ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಚಂಡಮಾರುತದಿಂದಾಗಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಕಡಲು ಪ್ರಕ್ಷುಬ್ಧಗೊಂಡಿದ್ದು ಎತ್ತರದ ಅಲೆಗಳು ಕಾಣಿಸಿಕೊಂಡಿವೆ. ಚಂಡಮಾರುತ ಎದುರಿಸಲು ಸಿದ್ಧತೆ ಮಾಡಿಕೊಂಡಿರುವ ಸರ್ಕಾರಗಳು ‘ಒಂದೂ ಪ್ರಾಣಹಾನಿಯಾಗಬಾರದು’ ಎನ್ನುವ ಗುರಿಯೊಂದಿಗೆ ಕಾರ್ಯಪ್ರವೃತ್ತವಾಗಿವೆ.

ADVERTISEMENT

ಹಿಂದಿಯಲ್ಲಿ ‘ತಿತ್ಲಿ’ ಎಂದರೆ ಚಿಟ್ಟೆ ಎಂದು ಅರ್ಥ. ಈ ಚಂಡಮಾರುತವನ್ನು ಹವಾಮಾನ ಇಲಾಖೆಯು ‘ಅತ್ಯುಗ್ರ’ (very severe cyclonic storm) ಎಂದು ವರ್ಗೀಕರಿಸಿದೆ. ಒಡಿಶಾದ ಐದು ಕರಾವಳಿ ಜಿಲ್ಲೆಗಳ ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವವಿರುವ ನಾಲ್ಕು ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

‘ಗಂಜಾಂ ಜಿಲ್ಲಾಡಳಿತವು ಸಮುದ್ರಕಿನಾರೆಯ ಸುಂದರ ನಗರಿ ಗೋಪಾಲಪುರದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ಇಂದು ಮುಂಜಾನೆ 5.30ಕ್ಕೆ ತಿತ್ಲಿ ಭೂಮಿಯನ್ನು ಸ್ಪರ್ಶಿಸಿತು’ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಎ.ಪಿ.ಪಧಿ ಹೇಳಿದ್ದಾರೆ.

ವಸ್ತುಸ್ಥಿತಿ ಮತ್ತು ಸಿದ್ಧತೆಯನ್ನು ಪರಾಮರ್ಶಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗಂಜಾಂ, ಪೂರಿ, ಖುರ್ದಾ, ಕೇಂದ್ರಪಾಡಾ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಮುಂಜಾಗರೂಕತಾ ಕ್ರಮವಾಗಿ ತಗ್ಗು ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಲು ಸೂಚಿಸಿದ್ದಾರೆ.ಭಾರೀ ಮಳೆಯಿಂದ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಂಜಾಂ, ಖುರ್ದಾ ಮತ್ತು ಪೂರಿ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನವಸತಿ ಪ್ರದೇಶಗಳು ಮುಳುಗಬಹುದು ಎಂದು ಅಂದಾಜಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ಎತ್ತರದ ಅಲೆಗಳು ಕಾಣಿಸಿಕೊಂಡಿದ್ದು ಕಡಲು ಪ್ರಕ್ಷುಬ್ಧಗೊಂಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್) ಮತ್ತು ಒಡಿಶಾ ವಿಪತ್ತು ನಿರ್ವಹಣ ಕ್ಷಿಪ್ರ ಕಾರ್ಯಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಈಗಾಗಲೇ ಈ ತಂಡಗಳನ್ನು ಸಂಕಷ್ಟದ ಸ್ಥಳಗಳಿಗೆ ಕಳುಹಿಸಲಾಗಿದೆ. ‘ನಾವು ಈವರೆಗೆ ಸೇನೆಯ ನೆರವು ಕೋರಿಲ್ಲ. ಅಗತ್ಯಬಿದ್ದರೆ ಕೇಳುತ್ತೇವೆ. ವಾಯುಪಡೆ ಮತ್ತು ನೌಕಾಪಡೆಗೆ ಮಾಹಿತಿ ನೀಡಿದ್ದೇವೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.