ADVERTISEMENT

ವಿಶ್ವ ಹಿಂದೂ ಪರಿಷತ್‌ ನಾಯಕ ಪ್ರಭಾಕರ್ ಹತ್ಯೆ ಪ್ರಕರಣ: ಪಂಜಾಬ್‌ನಲ್ಲಿ NIA ಶೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2024, 7:30 IST
Last Updated 30 ಆಗಸ್ಟ್ 2024, 7:30 IST
ಎನ್‌ಐಎ
ಎನ್‌ಐಎ   

ನವದೆಹಲಿ: ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ನಾಯಕ ವಿಕಾಸ್‌ ಪ್ರಭಾಕರ್ ಅಲಿಯಾಸ್‌ ವಿಕಾಸ್‌ ಬಗ್ಗಾ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಪಂಜಾಬ್‌ನ ಹಲವೆಡೆ ಶೋಧ ನಡೆಸಿದೆ.

ವಿಕಾಸ್ ಪ್ರಭಾಕರ್ ಹತ್ಯೆ ಪ್ರಕರಣ ಸಂಬಂಧ ಶೋಧ ನಡೆಸಲಾಗುತ್ತಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಏಪ್ರಿಲ್ 14ರಂದು ಪಂಜಾಬ್‌ನ ರೂಪನಗರ ಜಿಲ್ಲೆಯ ನಂಗಾಲ್‌ನ ವಿಶ್ವ ಹಿಂದೂ ಪರಿಷತ್‌ ಘಟಕದ ಅಧ್ಯಕ್ಷ ವಿಕಾಸ್‌ ಅವರನ್ನು ಹಂತಕರು ಗುಂಡಿಕ್ಕಿ ಕೊಲೆ ಮಾಡಿದ್ದರು. ಮೇ 9ರಂದು ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ADVERTISEMENT

ವಿಕಾಸ್‌ ಪ್ರಭಾಕರ್ ಅವರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ಪ್ರಮುಖ ಆರೋಪಿ 22 ವರ್ಷದ ಧರ್ಮೀಂದರ್‌ ಕುಮಾರ್‌ ಅಲಿಯಾಸ್‌ ಕುನಾಲ್‌ನನ್ನು ಎನ್‌ಐಎ ಮತ್ತು ದೆಹಲಿ ಪೊಲೀಸರು ಈಚೆಗೆ ಬಂಧಿಸಿದ್ದರು.

‘ವಿದೇಶಿ ಮೂಲದ ಖಾಲಿಸ್ತಾನಿ ಭಯೋತ್ಪಾದಕ ಹರ್ವೀಂದರ್‌ ಕುಮಾರ್‌ ಅಲಿಯಾಸ್‌ ಸೋನು ಸೂಚನೆಯಂತೆ ಧರ್ಮೀಂದರ್‌ ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ಹಂತಕರಿಗೆ ತಲುಪಿಸಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರು.

ಗುಂಡಿನ ದಾಳಿ ನಡೆಸಿದ ಇಬ್ಬರನ್ನು ಏಪ್ರಿಲ್ 16ರಂದು ಬಂಧಿಸಲಾಗಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಬಾಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ ಸದಸ್ಯರು ಹರ್ಜೀತ್ ಸಿಂಗ್‌ ಅಲಿಯಾಸ್‌ ಲಡ್ಡಿ ಮತ್ತು ಕುಲ್ವೀರ್‌ ಸಿಂಗ್‌ ಅಲಿಯಾಸ್ ಸಿಧು ತಲೆಮರೆಸಿಕೊಂಡಿದ್ದಾರೆ. ಅವರಿಬ್ಬರನ್ನು ಹುಡುಕಿಕೊಟ್ಟವರಿಗೆ ತಲಾ ₹10 ಲಕ್ಷ ಬಹುಮಾನ ಘೋಷಣೆಯಾಗಿದೆ.

‘ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಧರ್ಮೀಂದರ್‌ ಒಪ್ಪಿಕೊಂಡಿದ್ದಾನೆ. ಆತ ಈ ಹಿಂದೆಯೂ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದು, ಆತನ ವಿರುದ್ಧ ಪಂಜಾಬ್‌ ಮತ್ತು ಮಧ್ಯಪ್ರದೇಶದಲ್ಲಿ ಎರಡು ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.