ADVERTISEMENT

ವಿರೋಧ ಪಕ್ಷಗಳ ಒಗ್ಗಟ್ಟನ್ನು ಗ್ರೀಕ್ ಪೌರಾಣಿಕ ಪಾತ್ರ ಚಿಮೆರಾಗೆ ಹೋಲಿಸಿದ ಒಮರ್

ಪಿಟಿಐ
Published 22 ಜುಲೈ 2022, 2:29 IST
Last Updated 22 ಜುಲೈ 2022, 2:29 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ    

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತನ್ನ ಸ್ವಂತ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿ.ಎಂ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಆಗಸ್ಟ್ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯ ಮತದಾನದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭಾಗಿಯಾಗುವುದಿಲ್ಲ ಎಂದು ಹೇಳಿರುವ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಒಮರ್ ಅಬ್ದುಲ್ಲಾ, ವಿಪಕ್ಷಗಳು ಒಗ್ಗಟ್ಟನ್ನು ಗ್ರೀಕ್ ಪೌರಾಣಿಕ ಪಾತ್ರ ‘ಚಿಮೆರಾ’ಗೆ ಹೋಲಿಸಿದ್ದಾರೆ.

‘ವಿರೋಧ ಪಕ್ಷಗಳ ಒಗ್ಗಟ್ಟು ಕೇವಲ ತುಡಿತಕ್ಕಷ್ಟೇ ಸೀಮಿತ. ಅಂತಿಮವಾಗಿ ರಾಜಕೀಯ ಪಕ್ಷಗಳು ತಮ್ಮ ಸ್ವಂತ ಹಿತಾಸಕ್ತಿಗೆ ಅನುಗುಣವಾಗಿಯೇ ವರ್ತಿಸುತ್ತವೆ. 2019ರಲ್ಲಿ ಜಮ್ಮುವಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳನ್ನು ಜನರು ನೋಡಿದ್ದಾರೆ. ದೆವ್ವಗಳ ಬೆನ್ನಟ್ಟಿ ಸಮಯ ವ್ಯರ್ಥ ಮಾಡುವುದಕ್ಕಿಂತ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷಕ್ಕೆ ಸರಿಹೊಂದುವುದನ್ನು ಮಾಡುವುದು ಲೇಸು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಉಪ ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಎನ್​​ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಮತ್ತು ಯುಪಿಎ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಇದ್ದಾರೆ.

ಜಗದೀಪ್ ಧನಕರ್ ಅವರು ಈಗ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾರೆ. 2019ರಲ್ಲಿ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗಿನ ತಿಕ್ಕಾಟದಿಂದಲೇ ಆಗಾಗ ಸುದ್ದಿಯಾಗುತ್ತಿದ್ದರು.

ಜಗದೀಪ್ ಧನಕರ್ ಅವರು ತಮ್ಮನ್ನು ಬೆಂಬಲಿಸುವಂತೆ ಮಮತಾ ಬ್ಯಾನರ್ಜಿ ಅವರಲ್ಲಿ ಕೇಳಿದ್ದರು ಎಂದು ಮೂಲಗಳು ವರದಿ ಮಾಡಿವೆ.

‘ಉಪ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಎನ್‌ಡಿಎ ಅಭ್ಯರ್ಥಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ’ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿ ಘೋಷಣೆ ಮಾಡುವಾಗ ಯಾರೂ ಕೂಡ ಟಿಎಂಸಿಯನ್ನು ಸಂಪರ್ಕಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ಎರಡೂ ಸದನದಲ್ಲಿ ಟಿಎಂಸಿಗೆ 35 ಸಂಸದರು ಇದ್ದಾರೆ. ಹೀಗಿರುವಾಗ ನಮ್ಮಲ್ಲಿ ಒಂದು ಮಾತು ಹೇಳದೆ ವಿಪಕ್ಷಗಳ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ ಎಂದು ಅಭಿಷೇಕ್ ಬ್ಯಾನರ್ಜಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.