ಅಯೋಧ್ಯಾ: ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಮೂಲಕ ‘ಸೂರ್ಯ ತಿಲಕ’ ವನ್ನಿಟ್ಟ ಅದ್ಭುತ ಕ್ಷಣಗಳಿಗೆ ಅಯೋಧ್ಯೆ ಸಾಕ್ಷಿಯಾಯಿತು.
ಇಂದು ( ಶನಿವಾರ) ಶ್ರೀರಾಮನವಮಿ ಹಬ್ಬದಂದು ಅಯೋಧ್ಯೆಯಲ್ಲಿ ಸಂಭ್ರಮ ಮನೆಮಾಡಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೂರ್ಯನ ಕಿರಣಗಳು ಬಾಲರಾಮನ ಮೂರ್ತಿಯ ಹಣೆಯನ್ನು ಸ್ಪರ್ಶಿಸುತ್ತಿದ್ದಂತೆಯೇ, ಮಂದಿರದಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆಗಳು ಮೊಳಗಿದವು. ಇದೇ ವೇಳೆ, ಅರ್ಚಕರು ಆರತಿ ನೆರವೇರಿಸಿದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿ ರಾಮನವಮಿ ದಿನದಂದು ಭಗವಾನ್ ರಾಮನ ಮೂರ್ತಿಗೆ ‘ಸೂರ್ಯ ತಿಲಕ’ ಇಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಮಸೂರಗಳನ್ನು ಒಳಗೊಂಡಂತಹ ಜಾಲದ ನೆರವಿನಿಂದ ಹಣೆಗೆ ಸೂರ್ಯನ ಬೆಳಕು ಬೀಳುವಂತೆ ಮಾಡಲಾಗುತ್ತದೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಸಿಎಸ್‌ಐಆರ್– ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ಅಭಿವೃದ್ಧಿಪಡಿಸಿದೆ.
ರಾಮನವಮಿ ದಿನದಂದು ಮಧ್ಯಾಹ್ನ 12ರಿಂದ ಸುಮಾರು ಆರು ನಿಮಿಷಗಳ ಕಾಲ ಸೂರ್ಯನ ಬೆಳಕು, ಗರ್ಭಗುಡಿಯಲ್ಲಿರುವ ವಿಗ್ರಹದ ಹಣೆಯ ಮೇಲೆ ಬೀಳಲಿದೆ. ‘ರಾಮ ಮಂದಿರದ ಮೂರನೇ ಮಹಡಿಯಲ್ಲಿ ಆಪ್ಟಿಕಲ್ ಲೆನ್ಸ್‌ವೊಂದನ್ನು ಅಳವಡಿಸಲಾಗುತ್ತದೆ. ಅದು ಪೈಪ್‌ಗಳಲ್ಲಿ ಅಳವಡಿಸಿರುವ ರಿಫ್ಲೆಕ್ಟರ್‌ಗಳ ಮೂಲಕ ಬೆಳಕನ್ನು ವಿಗ್ರಹದ ಹಣೆಯ ಮೇಲೆ ಮೂಡಿಸಲಿದೆ’ ಎಂದು ಸಿಬಿಆರ್‌ಐನ ಮುಖ್ಯ ವಿಜ್ಞಾನಿ ಆರ್.ಧರ್ಮರಾಜು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.