ಚೆನ್ನೈ: ಐಐಟಿ–ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರು ಗೋಮೂತ್ರದ ಔಷಧೀಯ ಮಹತ್ವವನ್ನು ಹೊಗಳುತ್ತಿರುವುದು ಎನ್ನಲಾದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ದೇಶಿ ಗೋತಳಿಗಳ ಸಂರಕ್ಷಣೆ ಮತ್ತು ಸಾವಯವ ಕೃಷಿಯ ಮಹತ್ವದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಅವರು ಗೋಮೂತ್ರದ ಕುರಿತು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಜನವರಿ 15ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸನ್ಯಾಸಿಯೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಸನ್ಯಾಸಿಗೆ ಒಮ್ಮೆ ಜ್ವರ ಬಂದಿದ್ದಾಗ ಅವರು ಗೋಮೂತ್ರ ಸೇವಿಸಿದರು, ಜ್ವರ ಗುಣವಾಯಿತು ಎಂದು ಕಾಮಕೋಟಿ ಅವರು ಹೇಳಿದ್ದಾರೆ.
ಗೋಮೂತ್ರವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಗೋಮೂತ್ರದ ಔಷಧೀಯ ಮಹತ್ವವನ್ನು ಪರಿಗಣಿಸಬೇಕು ಎಂದಿದ್ದಾರೆ.
ಕಾಮಕೋಟಿ ಅವರ ಮಾತುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್, ‘ದೇಶದಲ್ಲಿ ಶಿಕ್ಷಣವನ್ನು ಹಾಳುಮಾಡುವುದು ಕೇಂದ್ರದ ಉದ್ದೇಶ’ ಎಂದು ಹೇಳಿದ್ದಾರೆ.
‘ತಮ್ಮ ಮಾತುಗಳಿಗೆ ಕಾಮಕೋಟಿ ಅವರು ಆಧಾರ ಒದಗಿಸಬೇಕು. ಅದು ಸಾಧ್ಯವಾಗದಿದ್ದರೆ ಅವರು ಕ್ಷಮೆ ಯಾಚಿಸಬೇಕು. ಕ್ಷಮೆ ಕೇಳದೆ ಇದ್ದರೆ ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ’ ಎಂದು ತಂಥೈ ಪೆರಿಯಾರ್ ದ್ರಾವಿಡರ್ ಕಳಗಂ ನಾಯಕ ಕೆ. ರಾಮಕೃಷ್ಣನ್ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.