ADVERTISEMENT

ಕುನೊ: ಚೀತಾಗಳಿಗೆ ನೀರುಣಿಸಿದ ಅರಣ್ಯ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ!

ಪಿಟಿಐ
Published 7 ಏಪ್ರಿಲ್ 2025, 10:58 IST
Last Updated 7 ಏಪ್ರಿಲ್ 2025, 10:58 IST
   

ಭೋಪಾಲ್‌(ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಅಧಿಕೃತ ಸೂಚನೆಗಳನ್ನು ಉಲ್ಲಂಘಿಸಿ ಚೀತಾ ಮತ್ತು ಅದರ ಮರಿಗಳಿಗೆ ನೀರುಣಿಸಿದ ಅರಣ್ಯ ಸಿಬ್ಬಂದಿ ವಿರುದ್ಧ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದಾರೆ.

ಪಾತ್ರೆಯೊಂದಕ್ಕೆ ನೀರು ಸುರಿದು ಜ್ವಾಲಾ ಹೆಸರಿನ ಚೀತಾ ಮತ್ತು ಅದರ ನಾಲ್ಕು ಮರಿಗಳಿಗೆ ನೀಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರು ಅದನ್ನು ಹಂಚಿಕೊಂಡಿದ್ದಾರೆ.

‘ಸೂಚನೆಗಳನ್ನು ಉಲ್ಲಂಘಿಸುವ ಮೂಲಕ ಅಶಿಸ್ತು ತೋರಿದ್ದಲ್ಲದೇ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಸಂಬಂಧಿತ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಉತ್ತಮ್ ಕುಮಾರ್ ಶರ್ಮಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಚೀತಾಗಳು ಜನವಸತಿ ಪ್ರದೇಶಕ್ಕೆ ಹೋಗದಂತೆ ತಡೆಯಲು ಮೇಲ್ವಿಚಾರಣಾ ತಂಡಕ್ಕೆ ತರಬೇತಿ ನೀಡಲಾಗುತ್ತದೆ. ಅಂತಹ ಸಂದರ್ಭ ಬಂದಾಗಲೆಲ್ಲ ಚೀತಾಗಳನ್ನು ಮರಳಿ ಕಾಡಿಗೆ ಹೋಗುವಂತೆ ಮಾಡಲು ನೀರು ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡಲಾಗುತ್ತದೆ. ಆ ದಿನ ಜ್ವಾಲಾ ಮತ್ತು ಅದರ ಮರಿಗಳು ಅರಣ್ಯ ವ್ಯಾಪ್ತಿಯನ್ನು ಮೀರಿ ಹೋಗುತ್ತಿರುವುದನ್ನು ತಿಳಿದು ಆಗ್ರಾ ವ್ಯಾಪ್ತಿಯ ಹೆಚ್ಚುವರಿ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು’ ಎಂದು ಶರ್ಮಾ ವಿವರಿಸಿದ್ದಾರೆ.

‘ಆ ದಿನ ಚಾಲಕ ಸತ್ಯನಾರನ್‌ ಗುರ್ಜಲ್‌ ಪಾತ್ರೆಗೆ ನೀರು ಸುರಿದ್ದಾನೆ. ಸುರಿದ ನಂತರ ಆತ ಅಲ್ಲಿಯೇ ಕುಳಿತಿದ್ದಾನೆ. ಚೀತಾಗಳು ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ನೀರು ನೀಡಿದ ತಕ್ಷಣ ದೂರ ಸರಿಯಲು ಸ್ಪಷ್ಟ ಸೂಚನೆಗಳಿವೆ. ಆದರೆ, ಇಲ್ಲಿ ಅದನ್ನು ಉಲ್ಲಂಘಿಸಲಾಗಿದೆ’ ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಸುಮಾರು 40 ಸೆಕೆಂಡುಗಳ ವಿಡಿಯೊದಲ್ಲಿ ವಾಹನ ಚಾಲಕ ಸ್ಟೀಲ್‌ ಪಾತ್ರೆಗೆ ನೀರು ಸುರಿಯುತ್ತಾನೆ. ನೆರಳಿನಲ್ಲಿ ಕುಳಿತ ಚೀತಾ ಮತ್ತು ಅದರ ಮರಿಗಳು ಪಾತ್ರೆಯ ಬಳಿಗೆ ಬಂದು ನೀರು ಕುಡಿಯಲು ಪ್ರಾರಂಭಿಸುತ್ತವೆ. ಆರಂಭದಲ್ಲಿ ಚೀತಾದ ಹತ್ತಿರ ಹೋಗಲು ಆತ ಹಿಂಜರಿದಿದ್ದು, ವಿಡಿಯೊ ಚಿತ್ರೀಕರಿಸುವ ವ್ಯಕ್ತಿ ಸೇರಿದಂತೆ ಅವನ ಜೊತೆಯಿದ್ದ ಇತರ ವ್ಯಕ್ತಿಗಳು ನೀರು ಸುರಿಯುವಂತೆ ಒತ್ತಾಯಿಸಿದ ನಂತರ ಪಾತ್ರೆಗೆ ನೀರು ಸುರಿಯುತ್ತಾನೆ. ನಂತರ ಸ್ವಲ್ಪ ಸಮಯ ಚೀತಾಗಳ ಬಳಿ ಕುಳಿತುಕೊಳ್ಳುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.