ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಅಧಿಕೃತ ನಿವಾಸದ ಬಳಿ ಕಸದ ನಡುವೆ ಸುಟ್ಟ ನೋಟುಗಳು ಪತ್ತೆಯಾಗಿವೆ.
–ಪಿಟಿಐ ಚಿತ್ರ
ನವದೆಹಲಿ: ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಆರಿಸುವ ಸಂದರ್ಭದಲ್ಲಿ ನಗದು ಪತ್ತೆಯಾಗಿರಲಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥರು ಹೇಳಿಕೆ ನೀಡಿದ್ದರೂ ವರ್ಮ ಅವರ ನಿವಾಸದಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ನೋಟುಗಳಂತಹ ವಸ್ತು ಪತ್ತೆಯಾಗಿರುವುದನ್ನು ವಿಡಿಯೊ ಒಂದು ಬಹಿರಂಗಪಡಿಸಿದೆ.
ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್ ಮೂಲಕ ಈ ವಿಡಿಯೊವನ್ನು ಪ್ರಕಟಿಸಿದೆ. ಅರೆಬರೆ ಸುಟ್ಟ, ಕರೆನ್ಸಿ ನೋಟುಗಳಂತೆ ಕಾಣಿಸುವ ವಸ್ತುಗಳು ಸೇರಿದಂತೆ ಬೇರೆ ಬೇರೆ ವಸ್ತುಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆರಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
‘ಬೆಂಕಿ ಆರಿಸುವಾಗ ನೋಟುಗಳು ಸಿಕ್ಕಿರಲಿಲ್ಲ’ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗರ್ಗ್ ನೀಡಿದ್ದ ಹೇಳಿಕೆ ಬಗ್ಗೆಯೇ ಅನುಮಾನ ಮೂಡಲು ಈ ವಿಡಿಯೊ ಕಾರಣವಾಗಿದೆ.
ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ವರದಿಗಳ ಬಗ್ಗೆ ವಿಚಾರಣೆ ನಡೆಸಿ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಸಲ್ಲಿಸಿರುವ ವರದಿಯನ್ನು ಕೂಡ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಸುಪ್ರೀಂ ಕೋರ್ಟ್ ವೆಬ್‌ಸೈಟ್ ಮೂಲಕ ಬಹಿರಂಗ ಆಗಿರುವ ವಿಡಿಯೊವನ್ನು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರ ಅವರು ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿಗೆ ನೀಡಿದ್ದರು. ಈ ವಿಡಿಯೊ, ಉಪಾಧ್ಯಾಯ ಅವರು ಸಲ್ಲಿಸಿರುವ 25 ಪುಟಗಳ ವರದಿಯ ಭಾಗವೂ ಹೌದು.
ನನ್ನ ಹೆಸರಿಗೆ ಕಳಂಕ ಅಂಟಿಸುವ ಉದ್ದೇಶದಿಂದ ನಗದು ಪತ್ತೆ ಆರೋಪವನ್ನು ಹೊರಿಸಲಾಗಿದೆಯಶವಂತ ವರ್ಮ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ
ತಾಳೆ ಇಲ್ಲ
‘ನ್ಯಾಯಮೂರ್ತಿ ವರ್ಮ ಅವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಿಯಂತ್ರಣ ಕೊಠಡಿಗೆ ಮಾರ್ಚ್ 14ರ ರಾತ್ರಿ 11.35ಕ್ಕೆ ಕರೆ ಬಂತು. ಅಗ್ನಿಶಾಮಕ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸಲಾಯಿತು’ ಎಂದು ಅತುಲ್ ಗರ್ಗ್ ಅವರು ಹೇಳಿದ್ದರು. ನ್ಯಾಯಮೂರ್ತಿ ಉಪಾಧ್ಯಾಯ ಅವರು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಈ ಹೇಳಿಕೆಗೆ ಭಿನ್ನವಾದ ವಿವರಣೆ ಇದೆ. ನ್ಯಾಯಮೂರ್ತಿ ವರ್ಮ ಅವರ ಆಪ್ತ ಕಾರ್ಯದರ್ಶಿಯು ಪೊಲೀಸ್ ನಿಯಂತ್ರಣ ಕೊಠಡಿಗೆ ಮೊದಲು ಕರೆ ಮಾಡಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು. ದೆಹಲಿ ಅಗ್ನಿಶಾಮಕ ದಳಕ್ಕೆ ಅವರು ಪ್ರತ್ಯೇಕವಾಗಿ ಮಾಹಿತಿ ನೀಡಿರಲಿಲ್ಲ ಎಂಬ ಮಾಹಿತಿಯು ವರದಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.