ADVERTISEMENT

ಅಲೋಕ್‌ ವರ್ಮಾ ವಿರುದ್ಧದ ತನಿಖಾ ವರದಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ

ಏಜೆನ್ಸೀಸ್
Published 12 ನವೆಂಬರ್ 2018, 10:20 IST
Last Updated 12 ನವೆಂಬರ್ 2018, 10:20 IST
ಸಿಬಿಐ ಕಚೇರಿ
ಸಿಬಿಐ ಕಚೇರಿ   

ನವದೆಹಲಿ:ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಕೇಂದ್ರ ಜಾಗೃತ ಆಯೋಗವು (ಸಿವಿಸಿ) ನಡೆಸಿದ ತನಿಖಾ ವರದಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಯಿತು.

ವರದಿ ಸಲ್ಲಿಕೆ ತಡವಾಗಿ ಎಂದಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ದ್ವಿಸದಸ್ಯ ಪೀಠ ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಿತು.

ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಯನ್ನು ನಡೆಸಿ ಎರಡು ವಾರದಲ್ಲಿ ವರದಿ ಸಲ್ಲಿಸಬೇಕೆಂದು ಕೋರ್ಟ್ ಹೇಳಿತ್ತು. ಆ ಗಡುವು ಭಾನುವಾರಕ್ಕೆ ಮುಗಿದಿತ್ತು. ಆದರೆ, ಸರ್ಕಾರದ ಪರ ವಕೀಲರು ಸೋಮವಾರದ ವಿಚಾರಣೆ ವೇಳೆ ಮೂರು ಸಂಪುಟಗಳ ವರದಿಯನ್ನು ಸಲ್ಲಿಸಿದ್ದರು.

ADVERTISEMENT

ವರದಿಯನ್ನು ತಡವಾಗಿ ಸಲಿಸಲಾಗಿದೆ ಎಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ಹೇಳಿತು. ‘ವರದಿ ಸಲ್ಲಿಕೆಗೆ ಅನುಕೂಲವಾಗಲಿ ಎಂದೇ ಕೋರ್ಟ್‌ ರಿಜಿಸ್ಟ್ರಾರ್ ಅವರಿಗೆ ಭಾನುವಾರವೂ ಕೆಲಸ ನಿರ್ವಹಿಸಲು ಹೇಳಲಾಗಿತ್ತು. 11.30ರವರೆಗೂ ಅವರು ವರದಿಗಾಗಿ ಕಾದಿದ್ದರು. ಸರಿಯಾದ ಸಮಯಕ್ಕೆ ವರದಿ ಸಲ್ಲಿಸಿದ್ದಿದ್ದರೆ, ಅದನ್ನು ಪರಿಶೀಲಿಸಲು ನಮಗೂ ಸಮಯ ಸಿಗುತ್ತಿತ್ತು’ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಸಿವಿಸಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ವರದಿ ದಾಖಲಿಸಲು ಒಂದು ತಾಸು ತಡವಾಯಿತು’ ಎಂದು ಕೋರ್ಟ್‌ಗೆ ಹೇಳಿದರು.

ಈ ವೇಳೆ,ಕಾಮನ್‌ ಕಾಸ್‌ ಎನ್‌ಜಿಒ ಪರ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದಾವೆ, ‘ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ನೇಮಕವಾಗಿರುವ ಎಂ. ನಾಗೇಶ್ವರ ರಾವ್‌ ಸಿಬಿಐಯ ಕೆಲಸ ಕಾರ್ಯಗಳು ಸ್ಥಗಿತಗೊಳ್ಳದಿರುವುದಕ್ಕೆ ಎಷ್ಟು ಕೆಲಸ ಮಾಡಬೇಕೋ ಅಷ್ಟನ್ನು ಮಾತ್ರ ಮಾಡಬೇಕು ಎಂದು ಕೋರ್ಟ್‌ ನಿರ್ದೇಶಿಸಿದ್ದರೂ, ಮಹತ್ವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಂಜನ್ ಗೊಗೊಯಿ, ‌‘ಮಧ್ಯಂತರ ನಿರ್ದೇಶಕರಾಗಿ ನೇಮಕವಾಗಿರುವ ಎಂ. ನಾಗೇಶ್ವರ ರಾವ್‌ ಅವರು ನೀತಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬುದು ನಮ್ಮ ಆದೇಶದ ಸಾರಾ’ ಎಂದು ನೆನಪಿಸಿದರು.

ಅಲೋಕ್‌ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 26ರಂದು ಸುಪ್ರೀಂ ಕೋರ್ಟ್‌ ನಡೆಸಿತ್ತು. ಅಲೋಕ್ ವಿರುದ್ಧದ ಆರೋಪಗಳ ತನಿಖಾ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಸಿವಿಸಿಗೆ ಸೂಚಿಸಿತ್ತು.ತನಿಖೆಯ ಉಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್‌ ಅವರನ್ನು ನೇಮಿಸಿತ್ತು.

ಅಲೋಕ್‌ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರ ನಡುವಣ ಕಚ್ಚಾಟದಿಂದಾಗಿ ಇಬ್ಬರೂ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ರಜೆ ಮೇಲೆ ಕಳುಹಿಸಿತ್ತು.ಕೆ.ವಿ.ಚೌಧರಿ ನೇತೃತ್ವದ ಮೂವರು ಸದಸ್ಯರ ಸಿವಿಸಿ ತಂಡದ ಎದುರು ಹಾಜರಾಗಿಅಲೋಕ್‌ ಅವರು ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಅಲೋಕ್‌ ಅವರ ಅರ್ಜಿ ವಿಚಾರಣೆಯನ್ನು ಈ ಮೊದಲು ನಡೆಸಿತ್ತು.ಕಾಮನ್‌ ಕಾಸ್‌ ಎನ್‌ಜಿಒ ಸಲ್ಲಿಸಿದ ಅರ್ಜಿಗೆ ನವೆಂಬರ್ 12ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಸಿಬಿಐ, ಸಿವಿಸಿ, ಅಸ್ತಾನಾ, ಅಲೋಕ್‌ ಮತ್ತು ರಾವ್‌ ಅವರಿಗೆ ಪೀಠವು ನೋಟಿಸ್‌ ನೀಡಿತ್ತು.

ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅ.23 ರಂದು ಹೊರಡಿಸಿದ ಆದೇಶವು ಪ್ರಧಾನಮಂತ್ರಿ, ಲೋಕಸಭೆ ಪ್ರತಿಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡಿರುವ ಉನ್ನತಾಧಿಕಾರ ಸಮಿತಿಯ ಒಪ್ಪಿಗೆ ಪಡೆದಿಲ್ಲ. ಈ ಆದೇಶವು ಸಂಪೂರ್ಣ ಕಾನೂನುಬಾಹಿರ, ಸ್ವೇಚ್ಛಾನುಸಾರ ಮತ್ತು ಪ್ರತಿಕಾರದಿಂದ ಕೂಡಿದೆ ಎಂದು ಅವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.