ADVERTISEMENT

ದೆಹಲಿ: ರ್‍ಯಾಲಿಯಲ್ಲಿ ವಿಂಟೇಜ್ ಟ್ರ್ಯಾಕ್ಟರ್‌ಗಳ ಕಲರವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:51 IST
Last Updated 27 ಜನವರಿ 2021, 2:51 IST
ರ್‍ಯಾಲಿಯಲ್ಲಿ ಭಾಗವಹಿಸಿದ್ದ ಟ್ರ್ಯಾಕ್ಟರ್‌ಗಳು –ಪಿಟಿಐ ಚಿತ್ರ
ರ್‍ಯಾಲಿಯಲ್ಲಿ ಭಾಗವಹಿಸಿದ್ದ ಟ್ರ್ಯಾಕ್ಟರ್‌ಗಳು –ಪಿಟಿಐ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಮಂಗಳವಾರ ನಡೆದ ರೈತರ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಹಲವು ವಿಂಟೇಜ್ ಟ್ರ್ಯಾಕ್ಟರ್‌ಗಳು ಗಮನ ಸೆಳೆದವು. 50-60 ವರ್ಷದಷ್ಟು ಹಳೆಯ ಟ್ರ್ಯಾಕ್ಟರ್‌ಗಳು ಹೊಸ ಟ್ರ್ಯಾಕ್ಟರ್‌ಗಳ ಸಮಕ್ಕೂ ಪರೇಡ್ ನಡೆಸಿದವು.

ಭವಜೀತ್ ಸಿಂಗ್ ಎಂಬುವವರು ಸೋವಿಯತ್ ರಷ್ಯಾ ಕಾಲದ ಟ್ರ್ಯಾಕ್ಟರ್‌ ಅನ್ನು ಪರೇಡ್‌ನಲ್ಲಿ ಚಲಾಯಿಸಿದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಐಟಿ ಉದ್ಯೋಗಿ ಆಗಿರುವ ಭವಜೀತ್ ಅವರು, ಈಗ ರಜೆ ಮೇಲೆ ಭಾರತಕ್ಕೆ ಬಂದಿದ್ದಾರೆ. ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಭವಜೀತ್ ಅವರು 1968ರಲ್ಲಿ ಸೋವಿಯತ್ ರಷ್ಯಾದಲ್ಲಿ ತಯಾರಾದ ಡಿಟಿ-14 ಎಂಬ ಟ್ರ್ಯಾಕ್ಟರ್ ಅನ್ನು ಚಲಾಯಿಸಿದರು. ಪರೇಡ್‌ನಲ್ಲಿ ಭಾಗಿಯಾದ ಅತ್ಯಂತ ಹಳೆಯ ಟ್ರ್ಯಾಕ್ಟರ್‌ಗಳಲ್ಲಿ ಇದೂ ಒಂದು.

‘ನಮ್ಮ ಕುಟುಂಬ ಈ ಟ್ರ್ಯಾಕ್ಟರ್ ಅನ್ನು 25 ವರ್ಷಗಳಿಂದ ಬಳಸುತ್ತಿದೆ. ಸ್ಟೀರಿಂಗ್ ವ್ಹೀಲ್ ಹೊರತುಪಡಿಸಿ, ಉಳಿದೆಲ್ಲಾ ಮೂಲ ಬಿಡಿಭಾಗಗಳು ಹಾಗೆಯೇ ಇವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಅಮರಿಂದರ್ ಸಿಂಗ್ ಅವರ ಮಹೀಂದ್ರಾ ಬಿ-275 ಟ್ರ್ಯಾಕ್ಟರ್‌ 40 ವರ್ಷಕ್ಕೂ ಹಳೆಯದ್ದು. ‘ನಾನು ಹುಟ್ಟಿದಾಗ, 1978ರಲ್ಲಿ ನನ್ನ ತಂದೆ ಇದನ್ನು ಖರೀದಿಸಿದ್ದರು. ನಮ್ಮ ಊರಿನ ಎಲ್ಲರೂ ಒಂದಲ್ಲಾ ಒಂದು ಸಲ ಈ ಟ್ರ್ಯಾಕ್ಟರ್‌ ಅನ್ನು ಚಲಾಯಿಸಿದ್ದಾರೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‌ನ ಬಣ್ಣ ಮಾಸಿದ್ದು ಬಿಟ್ಟರೆ, ಉಳಿದೆಲ್ಲಾ ಬಿಡಿಭಾಗಗಳು ಉತ್ತಮ ಸ್ಥಿತಿಯಲ್ಲಿವೆ.

1964ರಲ್ಲಿ ಮಾರುಕಟ್ಟೆಗೆ ಬಂದಿದ್ದ ಜಾನ್ ಡೀರ್ 4020 ಟ್ರ್ಯಾಕ್ಟರ್‌ನ ಮಾಲೀಕ ಗಿರಿರಾಜ್ ಸಿಂಗ್, ‘ಈ ಟ್ರ್ಯಾಕ್ಟರ್ ಬಲಭೀಮ. ಬಸ್‌ಗಳನ್ನೂ ಎಳೆಯವಷ್ಟು ತಾಕತ್ತು ಇದರಲ್ಲಿ ಇದೆ. ಈಗ ತಂತ್ರಜ್ಞಾನ ಬದಲಾಗಿದೆ. ಆದರೆ, ಆ ಕಾಲದಲ್ಲಿ ಈ ಟ್ರ್ಯಾಕ್ಟರ್ ಅತ್ಯಂತ ಜನಪ್ರಿಯವಾಗಿತ್ತು. ಇದೇ ಕಂಪನಿಯ ಮೂರು ಟ್ರ್ಯಾಕ್ಟರ್‌ಗಳು ನಮ್ಮ ಬಳಿ ಇವೆ. ಆದರೆ, ಇದು ಅತ್ಯಂತ ಅಮೂಲ್ಯವಾದದ್ದು’ ಎಂದು ಅವರು ಖುಷಿ ಹಂಚಿಕೊಂಡರು.

ಹರಿಯಾಣದ ಅಕಲ್‌ಪ್ರೀತ್ ಸಿಂಗ್ ಅವರ ಎಚ್‌ಎಂಟಿ ಟ್ರ್ಯಾಕ್ಟರ್ ಸಹ ಎಲ್ಲರ ಗಮನ ಸೆಳೆಯಿತು. ಎಚ್‌ಎಂಟಿ 5911 ಮಾದರಿಯ ಟ್ರ್ಯಾಕ್ಟರ್‌ ಅದು. ಟ್ರ್ಯಾಕ್ಟರ್‌ನ ಮಡ್‌ಗಾರ್ಡ್‌ಗಳ ಮೇಲೆ ಅಳವಡಿಸಿದ್ದ ಧ್ವನಿವರ್ಧಕದಿಂದ ಹೊರಹೊಮ್ಮುತ್ತಿದ್ದ ‘ರಂಗ್‌ ದೇ ಬಸಂತಿ ಚೋಲಾ’ ಗೀತೆಗೆ ರ್‍ಯಾಲಿಯಲ್ಲಿದ್ದ ರೈತರು ದನಿಗೂಡಿಸಿದ್ದರು. ‘1981ರಲ್ಲಿ ನನ್ನ ತಂದೆ ಇದನ್ನು ಖರೀದಿಸಿದ್ದರು. ಆಗ ಅದರ ಬೆಲೆ ₹ 80,000. ಈಗ ಇದರ ಮೌಲ್ಯ ₹ 8 ಲಕ್ಷದಷ್ಟು’ ಎಂದು ಅವರು ಹೇಳಿದರು. ಪರೇಡ್‌ನಲ್ಲಿ ಭಾಗವಹಿಸಲು ಎಂದೇ ಈ ಟ್ರ್ಯಾಕ್ಟರ್‌ ಅನ್ನು ಈಚೆಗೆ ರಿಪೇರಿ ಮಾಡಿಸಿದೆ ಎಂದು ಅಕಲ್‌ಪ್ರೀತ್ ಹೇಳಿದರು.

ರ್‍ಯಾಲಿಯಲ್ಲಿ ಭಾಗವಹಿಸಿದ್ದ ಟ್ರ್ಯಾಕ್ಟರ್‌ಗಳು

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.