ADVERTISEMENT

ವಿಶಾಖಪಟ್ಟಣ ದುರಂತ: ಒದ್ದೆ ಬಟ್ಟೆ ಮಾಸ್ಕ್ ಬಳಸುವಂತೆ ಪಾಲಿಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 11:00 IST
Last Updated 7 ಮೇ 2020, 11:00 IST
ವಿಶಾಖಪಟ್ಟಣ ಅನಿಲ ಸೋರಿಕೆ ದುರಂತದಲ್ಲಿ ಅಸ್ವಸ್ಥಗೊಂಡವರು
ವಿಶಾಖಪಟ್ಟಣ ಅನಿಲ ಸೋರಿಕೆ ದುರಂತದಲ್ಲಿ ಅಸ್ವಸ್ಥಗೊಂಡವರು   

ವಿಶಾಖಪಟ್ಟಣಂ(ಆಂಧ್ರಪ್ರದೇಶ): ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆಯಕಾರಣ ಈ ಸ್ಥಾವರದ ಸುತ್ತಮುತ್ತ ವಾಸಿಸುವ ಜನರು ಒದ್ದೆ ಬಟ್ಟೆಯಿಂದ ಬಾಯಿ ಹಾಗೂ ಮೂಗು ಮುಚ್ಚಿಕೊಂಡು ಮನೆಯೊಳಗೆ ಇರುವಂತೆ ವಿಶಾಖಪಟ್ಟಣ ಮಹಾನಗರಪಾಲಿಕೆ ಜನರಿಗೆ ಎಚ್ಚರಿಕೆ ನೀಡಿದೆ.

ಇಲ್ಲಿನ ಗೋಪಾಲಪಟ್ಟಣಂನ ಎಲ್‌ಜಿ ಪಾಲಿಮರ್ಸ್ ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆ ಉಂಟಾಗಿ 8 ವರ್ಷದ ಬಾಲಕ ಸೇರಿದಂತೆ 7ಮಂದಿ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ADVERTISEMENT

ಈ ಸ್ಥಾವರದ ಸುತ್ತಮುತ್ತ ವಾಸಿಸುವ ಜನರು ಮನೆಯ ಹೊರಗೆ ಬರದಂತೆ ಪಾಲಿಕೆ ಅಧಿಕಾರಿಗಳು ಕಟ್ಟಪ್ಪಣೆ ಮಾಡಿದ್ದಾರೆ.

ಒದ್ದೆ ಬಟ್ಟೆಯಿಂದ ಬಾಯಿ ಮತ್ತು ಮೂಗುಗಳನ್ನು ಮುಚ್ಚಿಕೊಂಡು ಸುರಕ್ಷತೆಯಿಂದ ಇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.ಅಲ್ಲದೆ, ಸ್ಥಾವರದ ಸುತ್ತಮುತ್ತ ನೀರು ಸಿಂಪರಣೆ ಮಾಡುವುದು, ಜನರಲ್ಲಿ ಮುಖಕ್ಕೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಮೂಲಕ ಅನಿಲ ಸೋರಿಕೆಯ ದುಷ್ಪರಿಣಾಮವನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿ, ಪೊಲೀಸರು, ತುರ್ತು ಚಿಕಿತ್ಸಾ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಆದೇಶ

ಜನರ ಪ್ರಾಣ ಉಳಿಸುವುದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಪರಿಸ್ಥಿತಿಯನ್ನು ತಹಬದಿಗೆ ತರುವಂತೆಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

1961ರಲ್ಲಿ ಇಲ್ಲಿ ಸ್ಥಾಪನೆಯಾಗಿರುವ ದಕ್ಷಿಣ ಕೊರಿಯಾದ ಎಲ್ ಜಿ ಪಾಲಿಮರ್ಸ್ ಸಂಸ್ಥೆಯುಪಾಲಿಸ್ಟೆರಿಯನ್ ಮತ್ತು ಪ್ಲಾಸ್ಟಿಕ್‌ನಿಂದ ಜನರಿಗೆ ಅಗತ್ಯ ಉಪಕರಣಗಳನ್ನು ತಯಾರಿಸುತ್ತಾ ಬಂದಿದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದ ಈ ಸಂಸ್ಥೆಯಲ್ಲಿ ಅನಿಲ ಸೋರಿಕೆಯಾಗಿರುವುದು ಇಲ್ಲಿನ ಜನರನ್ನು ಆತಂಕಕ್ಕೆ ಈಡುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.