
ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಭಾರತದ ಜತೆ ಸುಮಾರು ಎಂಟು ದಶಕಗಳಿಂದ ಕಾಯ್ದುಕೊಂಡು ಬಂದಿರುವ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಗೊಳಿಸುವುದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಗುರುವಾರ ದೆಹಲಿಗೆ ಬಂದಿಳಿದರು.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕವು ಭಾರತದ ಮೇಲೆ ಭಾರಿ ಒತ್ತಡ ಹೇರಿರುವ ಸಂದರ್ಭದಲ್ಲೇ ಎರಡು ದಿನಗಳ ಈ ಭೇಟಿ ನಡೆಯುತ್ತಿದೆ. ಸಂಜೆ 6.30ಕ್ಕೆ ಇಲ್ಲಿನ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಲಿಂಗನದ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಇಬ್ಬರೂ ಜತೆಯಾಗಿ ತೆರಳಿದರು.
ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ಬಳಿಕ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಭಾರತ–ರಷ್ಯಾ 23ನೇ ಶೃಂಗಸಭೆಯ ಮಾತುಕತೆ ಶುಕ್ರವಾರ ನಡೆಯಲಿದ್ದು, ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ರಷ್ಯಾದಿಂದ ಯುದ್ಧ ವಿಮಾನಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ.
ರಕ್ಷಣಾ ಕ್ಷೇತ್ರದಲ್ಲಿನ ಸಹಕಾರ ಹೆಚ್ಚಿಸುವುದು, ಭಾರತ-ರಷ್ಯಾ ವ್ಯಾಪಾರ ಸಂಬಂಧವನ್ನು ಬಾಹ್ಯ ಒತ್ತಡದಿಂದ ತಡೆಯುವುದು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ನಿರ್ಮಾಣದಲ್ಲಿ ಸಹಕಾರಕ್ಕೆ ಹೊಸ ಅವಕಾಶಗಳನ್ನು ಅನ್ವೇಷಿಸುವುದು ಉಭಯ ನಾಯಕರ ನಡುವಿನ ಶೃಂಗಸಭೆಯ ಕೇಂದ್ರಬಿಂದುವಾಗಿದೆ. ಮಾತುಕತೆಯ ಫಲಿತಾಂಶವನ್ನು ಪಾಶ್ಚಿಮಾತ್ಯ ದೇಶಗಳು ಕೂಡಾ ಬಹಳ ಕುತೂಹಲದಿಂದ ಎದುರು ನೋಡುತ್ತಿವೆ.
ಭಾರತ-ಅಮೆರಿಕ ಸಂಬಂಧವು ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷರ ಭಾರತ ಭೇಟಿಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಶೃಂಗಸಭೆಯ ನಂತರ, ಎರಡೂ ಕಡೆಯವರು ವ್ಯಾಪಾರ ಕ್ಷೇತ್ರ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿ ಅವರು ಗುರುವಾರ ರಾತ್ರಿ ಆಯೋಜಿಸಿದ ಔತಣಕೂಟದಲ್ಲಿ ಪುಟಿನ್ ಪಾಲ್ಗೊಂಡರು. ಶೃಂಗಸಭೆಯ ಆರಂಭಕ್ಕೂ ಮೊದಲು ಶುಕ್ರವಾರ ಬೆಳಿಗ್ಗೆ ರಷ್ಯಾ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ನೀಡಲಾಗುವುದು. ಶೃಂಗಸಭೆ ನಡೆಯಲಿರುವ ಹೈದರಾಬಾದ್ ಹೌಸ್‌ನಲ್ಲಿ ಮೋದಿ ಅವರು ಪುಟಿನ್ ಮತ್ತು ಅವರ ನಿಯೋಗಕ್ಕೆ ಭೋಜನ ಕೂಟ ಆಯೋಜಿಸಲಿದ್ದಾರೆ. ಪುಟಿನ್ ಅವರು ಬೆಳಿಗ್ಗೆ ರಾಜ್‌ಘಾಟ್‌ಗೂ ಭೇಟಿ ನೀಡುವರು ಎಂದು ಮೂಲಗಳು ತಿಳಿಸಿವೆ.ವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ಪುಟಿನ್ ಜತೆಗಿನ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ದೀರ್ಘ ಕಾಲದಿಂದಲೂ ಇದ್ದು, ಅದು ನಮಗೆ ಹೆಚ್ಚು ಪ್ರಯೋಜನ ನೀಡಿದೆನರೇಂದ್ರ ಮೋದಿ, ಪ್ರಧಾನಿ
ನನ್ನ ಸ್ನೇಹಿತ ಮೋದಿ ಅವರನ್ನು ಭೇಟಿಯಾಗಲು ತುಂಬಾ ಸಂತಸವಾಗುತ್ತಿದೆ. ಭಾರತದೊಂದಿಗಿನ ನಮ್ಮ ಸಹಕಾರದ ವ್ಯಾಪ್ತಿಯು ತುಂಬಾ ದೊಡ್ಡದಾಗಿದೆವ್ಲಾದಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
* ವಿಮಾನ ನಿಲ್ದಾಣದಲ್ಲಿ ರಷ್ಯಾ ಅಧ್ಯಕ್ಷರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ
* ಭಾರತ–ರಷ್ಯಾ 23ನೇ ಶೃಂಗಸಭೆ ಮಾತುಕತೆ ಇಂದು
* ಪುಟಿನ್ ಶುಕ್ರವಾರ ರಾತ್ರಿ 9ಕ್ಕೆ ಭಾರತದಿಂದ ತೆರಳುವ ಸಾಧ್ಯತೆ
* ರಷ್ಯಾ ಅಧ್ಯಕ್ಷರು 2021ರಲ್ಲಿ ಕೊನೆಯದಾಗಿ ಭಾರತಕ್ಕೆ ಭೇಟಿ ನೀಡಿದ್ದರು
* ಪ್ರಧಾನಿ ಮೋದಿ ಅವರು ಕಳೆದ ವರ್ಷ ಜುಲೈನಲ್ಲಿ ದ್ವಿಪಕ್ಷೀಯ ಶೃಂಗದಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಭೇಟಿ ನೀಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.