
ಕೋಲ್ಕತ್ತ/ರಾಯಸೇನ್/ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ (ಬಿಎಲ್‌ಒ) ಕಾರ್ಯನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳದ ಒಬ್ಬರು ಹಾಗೂ ಮಧ್ಯ ಪ್ರದೇಶದ ಇಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.
‘ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಇದ್ದ ಒತ್ತಡ ಮತ್ತು ಕೆಲಸ ಹೊರೆಯೇ ಸಾವಿಗೆ ಕಾರಣ’ ಎಂದು ಮೃತರ ಕುಟುಂಬಗಳು ಆರೋಪಿಸಿವೆ. ‘ಎಸ್‌ಐಆರ್ ಕಾರಣದಿಂದ ರಾಜ್ಯದಲ್ಲಿ ಬಿಎಲ್‌ಒಗಳನ್ನೂ ಸೇರಿದಂತೆ ಇಲ್ಲಿಯವರೆಗೆ ಸುಮಾರು 34 ಮಂದಿ ಮೃತಪಟ್ಟಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಅರೆಕಾಲಿಕ ಶಿಕ್ಷಕಿ ರಿಂಕೂ ತರಫ್ದಾರ್ (52) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಸಾಯುವುದಕ್ಕೂ ಮುನ್ನ ಅವರು ಬರೆದಿಟ್ಟಿದ್ದ ಪತ್ರವೊಂದು ದೊರೆತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ರಿಂಕೂ ಅವರ ಆತ್ಮಹತ್ಯೆ ಮತ್ತೊಂದು ಎಚ್ಚರಿಕೆ ಗಂಟೆ. ತಮ್ಮ ಮರಣ ಪತ್ರದಲ್ಲಿ ಅವರು ಚುನಾವಣಾ ಆಯೋಗವನ್ನು ದೂರಿದ್ದಾರೆ. ಎಸ್‌ಐಆರ್‌ಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?’ ಎಂದು ಮಮತಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ರಿಂಕೂ ಅವರ ಮರಣ ಪತ್ರವನ್ನೂ ಹಂಚಿಕೊಂಡಿದ್ದಾರೆ. ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರು ಪ್ರತಿಕ್ರಿಯಿಸಿ, ‘ಇದೊಂದು ನಕಲಿ ಮರಣ ಪತ್ರ’ ಎಂದರು.
ಇಬ್ಬರ ಸಾವು: ಮಧ್ಯ ಪ್ರದೇಶದ ರಾಯಸೇನ್ ಮತ್ತು ದಮೋಹ್ ಜಿಲ್ಲೆಗಳಲ್ಲಿ ಬಿಎಲ್‌ಒಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರಾದ ರಮಾಕಾಂತ್ ಪಾಂಡೆ (50) ಮತ್ತು ಸೀತಾರಾಮ್ ಗೊಂಡ್ (50) ಅವರು ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ. ರಾಯಸೇನ್‌ನಲ್ಲಿ ಶಿಕ್ಷಕ ನಾರಾಯಣ ದಾಸ್ ಸೋನಿ ಎಂಬುವರು ಕಳೆದ ಆರು ದಿನಗಳಿಂದ ಕಾಣೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.